ತಿರುವನಂತಪುರಂ: ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ವಯನಾಡು ಹಾಗೂ ಸುತ್ತಮುತ್ತಲ ಪ್ರದೇಶ ಅಕ್ಷರಶ ನಲುಗಿ ಹೋಗಿದೆ, ಭೂಕುಸಿತದಿಂದ ಇದುವರೆಗೆ ಮುನ್ನೂರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಇನ್ನೂ ಸುಮಾರು ಮಂದಿ ನಾಪತ್ತೆಯಾಗಿದ್ದಾರೆ ಅವರನ್ನು ಪತ್ತೆ ಹಚ್ಚುವ ಕಾರ್ಯ ಬರದಿಂದ ಸಾಗುತ್ತಿದೆ.
ಭೂಕುಸಿತದಿಂದ ತತ್ತರಿಸಿರುವ ವಯನಾಡ್ನಲ್ಲಿ ಪುನರ್ವಸತಿ ಕಾರ್ಯಗಳನ್ನು ಕೈಗೊಳ್ಳಲು ಈಗಾಗಲೇ ಹಲವಾರು ಸಂಘ ಸಂಸ್ಥೆಗಳು ದೇಣಿಗೆ ಸಂಗ್ರಹಿಸುತ್ತಿದೆ, ಅಷ್ಟು ಮಾತ್ರವಲ್ಲೇ ಚಿತ್ರರಂಗದ ನಟ ನಟಿಯರು ಸೇರಿದಂತೆ ರಾಜಕೀಯ ನಾಯಕರು ಹೀಗೆ ಎಲ್ಲರೂ ತಮ್ಮ ಕೈಯಲ್ಲಾದ ಸಹಾಯ ಮಾಡಲು ಮುಂದಾಗಿದ್ದಾರೆ ಇದರ ಜೊತೆಗೆ ತಮಿಳುನಾಡಿನ ಹದಿಮೂರು ವರ್ಷದ ಭರತನಾಟ್ಯ ಕಲಾವಿದೆ ಹರಿಣಿ ಶ್ರೀ ವಯನಾಡು ಭೂಕುಸಿತ ಸಂತ್ರಸ್ತರ ದೇಣಿಗೆಗೆ ತನ್ನ ಕೈಯಲ್ಲಾದ ಸಹಾಯ ಮಾಡಲು ಮುಂದಾಗಿದ್ದಾಳೆ ಅದರಂತೆ ನಿರಂತರ ಮೂರೂ ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶಿಸಿ ಅದರಿಂದ ಬಂದ ಹಣವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಹಸ್ತಾಂತರಿಸಿದ್ದಾಳೆ.
ನಿಧಿ ಸಂಗ್ರಹಿಸುವ ಸಲುವಾಗಿ ಮೂರು ಗಂಟೆಗಳ ಕಾಲ ಭರತನಾಟ್ಯವನ್ನು ಪ್ರದರ್ಶಿಸಿದ ಹರಿಣಿ ಶ್ರೀ. ಅದರಿಂದ ಬಂದ ನಗದು ಜೊತೆಗೆ ತಾನು ಈ ಹಿಂದೆ ಉಳಿಸಿದ್ದ ಹಣವನ್ನು ಸೇರಿಸಿಕೊಂಡು ಕೇರಳ ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ ನೀಡಿದ್ದಾಳೆ. ಕೇರಳ ಸರ್ಕಾರ ಈ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ ಜುಲೈ 30ರಂದು ಸುರಿದ ಧಾರಾಕಾರ ಮಳೆ ಮುಂಡಕ್ಕೈ ಮತ್ತು ಚೂರಲ್ಮಲಾ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿ ನೂರಾರು ಮನೆಗಳು ನೆಲಸಮಗೊಂಡಿವೆ. ನಾಲ್ಕು ನೂರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದರು, ರಕ್ಷಣಾ ತಂಡ ಕಾರ್ಯಾಚರಣೆ ನಡೆಸಿ ಮುನ್ನೂರಕ್ಕೂ ಅಧಿಕ ಶವಗಳನ್ನು ಈಗಾಗಲೇ ಪತ್ತೆಹಚ್ಚಿದ್ದು ಇನ್ನೂ ನೂರಾರು ಮಂದಿ ನಾಪತ್ತೆಯಾಗಿದ್ದಾರೆ.