ಭಾರತ-ರಷ್ಯಾ 23ನೇ ಜಂಟಿ ವಾರ್ಷಿಕ ಸಭೆ; 100 ಬಿಲಿಯನ್ ಡಾಲರ್ಗೆ ವ್ಯಾಪಾರ ಹೆಚ್ಚಿಸುವ ಗುರಿ

Share with

ನವದೆಹಲಿ, ಡಿಸೆಂಬರ್ 5: ಭಾರತ ಹಾಗೂ ರಷ್ಯಾ ನಡುವಿನ 23ನೇ ಜಂಟಿ ವಾರ್ಷಿಕ ಶೃಂಗಸಭೆ (India Russia 23rd Joint Annual Summit) ಶುಕ್ರವಾರ ಭರ್ಜರಿಯಾಗಿ ನಡೆಯಿತು. ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನೇತೃತ್ವದಲ್ಲಿ ತುಂಬಿದ ಗೃಹದಲ್ಲಿ ನಡೆದ ಈ ಸಭೆಯಲ್ಲಿ ಜಾಗತಿಕ ರಾಜಕೀಯ ಅನಿಶ್ಚಿತ ಪರಿಸ್ಥಿತಿಯಲ್ಲಿ ಎರಡೂ ದೇಶಗಳ ನಡುವಿನ ಆರ್ಥಿಕ ಸಂಬಂಧವನ್ನು ಬಲಪಡಿಸಲು ಬದ್ಧತೆ ಇರುವುದನ್ನು ತೋರಿಸಲಾಯಿತು. ಸಭೆ ಬಳಿಕ ಮೋದಿ ಮತ್ತು ಪುಟಿನ್ ಇಬ್ಬರೂ ಜಂಟಿ ಹೇಳಿಕೆ ನೀಡಿ, ತಮ್ಮ ಬದ್ಧತೆಯನ್ನು ಒತ್ತಿ ಹೇಳಿದ್ದಾರೆ.

ನೂರು ಬಿಲಿಯನ್ ಡಾಲರ್ ವಹಿವಾಟು ಗುರಿ
‘ಭಾರತ-ರಷ್ಯಾ: ನಂಬಿಕೆ ಮತ್ತು ಗೌರವದ ತಳಹದಿಯಲ್ಲಿ ದೀರ್ಘ ಸಮಯದ ಪ್ರಗತಿದಾಯಕ ಜೊತೆಗಾರಿಕೆ’ ಎನ್ನುವ ಶೀರ್ಷಿಕೆಯಲ್ಲಿ ಬಿಡುಗಡೆ ಇಬ್ಬರೂ ನಾಯಕರು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಎರಡು ದೇಶಗಳ ನಡುವಿನ ವ್ಯಾಪಾರ ವಹಿವಾಟನ್ನು 100 ಬಿಲಿಯನ್ ಡಾಲರ್ಗೆ ಏರಿಸುವ ಮಹತ್ವಾಕಾಂಕ್ಷಿ ಗುರಿಯನ್ನು ಈ ಹೇಳಿಕೆಯಲ್ಲಿ ನೀಡಲಾಗಿದೆ. ಸದ್ಯ ದ್ವಿಪಕ್ಷೀಯ ವ್ಯಾಪಾರ ವಹಿವಾಟು ಸುಮಾರು 69 ಬಿಲಿಯನ್ ಡಾಲರ್ನಷ್ಟು ಇದೆ.

ನೂರು ಬಿಲಿಯನ್ ಡಾಲರ್ಗೆ ವ್ಯಾಪಾರ ವಹಿವಾಟು ಹೆಚ್ಚಿಸಲು ಎರಡೂ ದೇಶಗಳು ವಿವಿಧ ಕ್ರಮಗಳನ್ನು ಕೈಗೊಳ್ಳಲು ಸಿದ್ಧವಿವೆ. ಇದರ ಭಾಗವಾಗಿ 2030ರವರೆಗೆ ಆರ್ಥಿಕ ಸಹಕಾರ ಒಪ್ಪಂದಕ್ಕೂ ಸಹಿ ಹಾಕಲಾಗಿದೆ.

ನೂರು ಬಿಲಿಯನ್ ಡಾಲರ್ ಟ್ರೇಡಿಂಗ್ ಗುರಿ ಈಡೇರಬೇಕಾದರೆ ಭಾರತದಿಂದ ರಷ್ಯಾಗೆ ಹೆಚ್ಚೆಚ್ಚು ಉತ್ಪನ್ನಗಳ ರಫ್ತಾಗಬೇಕು. ಸದ್ಯ ರಷ್ಯಾ ಎದುರು ಭಾರತಕ್ಕೆ ವಿಪರೀತ ಟ್ರೇಡ್ ಡೆಫಿಸಿಟ್ ಇದೆ. ಎರಡೂ ದೇಶಗಳ ನಡುವಿನ ವ್ಯಾಪಾರದಲ್ಲಿ ರಷ್ಯಾದ ಪಾಲೇ ಬಹಳ ಹೆಚ್ಚಿದೆ. ಇಂದು ನಡೆದ ದ್ವಿಪಕ್ಷೀಯ ಸಭೆಯಲ್ಲಿ ಈ ಅಂಶಗಳನ್ನು ಆಳವಾಗಿ ಚರ್ಚಿಸಲಾಗಿದೆ.

ಫಾರ್ಮಾ, ಆಟೊಮೊಬೈಲ್, ಕೃಷಿ, ಹೈಟೆಕ್ನಾಲಜಿ ಉತ್ಪನ್ನಗಳನ್ನು ಭಾರತದಿಂದ ರಷ್ಯಾಗೆ ಸರಬರಾಜು ಮಾಡಲು ಅವಕಾಶ ಕೊಡಲಾಗಬಹುದು. ಇಂಥ ಕೆಲ ಪ್ರಮುಖ ಸೆಕ್ಟರ್ಗಳನ್ನು ಅವಲೋಕಿಸಲಾಗಿದೆ.

ಭಾರತ ಹಾಗೂ ಯೂರೇಷಿಯನ್ ಎಕನಾಮಿಕ್ ಯೂನಿಯನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಏರ್ಪಡಲು ಹೆಚ್ಚೆಚ್ಚು ಪ್ರಯತ್ನಗಳನ್ನು ಹಾಕಲು ಈ ಸಭೆಯಲ್ಲಿ ಇಂಗಿತ ವ್ಯಕ್ತವಾಗಿದೆ. ಈ ಯೂರೋಷಿಯನ್ ಎಕನಾಮಿಕ್ ಯೂನಿಯನ್ನಲ್ಲಿ ರಷ್ಯಾ, ಆರ್ಮೇನಿಯಾ, ಬೆಲಾರಸ್, ಕಜಕಸ್ತಾನ್, ಕಿರ್ಗಿಸ್ತಾನ್ ದೇಶಗಳಿವೆ. ಈ ಗುಂಪಿನೊಂದಿಗೆ ಭಾರತ ಎಫ್ಟಿಎ ಮಾಡಿಕೊಂಡರೆ ಸಾಕಷ್ಟು ರಫ್ತಿಗೆ ಅವಕಾಶ ಸಿಗಬಹುದು. ಈ ಎಲ್ಲಾ ದೇಶಗಳ ಜೊತೆ ಭಾರತದ ಉತ್ತಮ ಸಂಬಂಧವೂ ಇದೆ.


Share with

Leave a Reply

Your email address will not be published. Required fields are marked *