ನೇಪಾಳಕ್ಕೆ 27 ಮಕ್ಕಳ ಕಳ್ಳಸಾಗಾಣೆ..! ಪೊಲೀಸರಿಂದ ತನಿಖೆ

Share with

ಉತ್ತಮ ಶಿಕ್ಷಣದ ನೆಪವೊಡ್ಡಿ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಒಟ್ಟು 27 ಮಕ್ಕಳನ್ನು ನೇಪಾಳಕ್ಕೆ ಕಳ್ಳಸಾಗಣೆ ಮಾಡಲಾಗಿದೆ ಎಂಬ ಗಂಭೀರ ಆರೋಪದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕಳ್ಳಸಾಗಣೆದಾರರಿಂದ ತಪ್ಪಿಸಿಕೊಂಡು ಇತ್ತೀಚೆಗೆ ಮನೆಗೆ ಮರಳಿದ ಇಬ್ಬರು ಮಕ್ಕಳು ಪೋಷಕರಲ್ಲಿ ಮಾಹಿತಿ ನೀಡಿದ ನಂತರ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅಮಿತ್ ರೇಣು ಅವರು, ತನಿಖಾ ತಂಡವು ಒಂದು ಗ್ರಾಮಕ್ಕೆ ಭೇಟಿ ನೀಡಿದಾಗ, ಅಲ್ಲಿಂದಲೇ 11 ಮಕ್ಕಳನ್ನು ನೇಪಾಳಕ್ಕೆ ಕರೆದೊಯ್ದಿರುವುದು ದೃಢಪಟ್ಟಿದೆ. 11 ಮಕ್ಕಳಲ್ಲಿ ನಾಲ್ವರು ಬುಧವಾರದಂದು ಮರಳಿ ಬಂದಿದ್ದು, ಇನ್ನೂ ಐವರು ಮಕ್ಕಳು ನೇಪಾಳದಲ್ಲಿಯೇ ಇದ್ದಾರೆ. ಅವರನ್ನು ಮರಳಿ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಬೇರೆ ಧರ್ಮಕ್ಕೆ ಮತಾಂತರಗೊಳಿಸುವ ಪ್ರಯತ್ನಗಳು ನಡೆದಿವೆ ಎಂದು ಆರೋಪ ಕೇಳಿ ಬಂದಿದೆ. ಜಿಲ್ಲೆಯ ಇತರ ಭಾಗಗಳಿಂದ 16 ಮಕ್ಕಳ ಬಗ್ಗೆ ಇದೇ ರೀತಿಯ ವರದಿ ನಮ್ಮ ಗಮನಕ್ಕೆ ಬಂದಿದೆ. ಆದರೆ ಇದುವರೆಗೆ ಯಾವುದೇ ದೂರು ಬಂದಿಲ್ಲ ಎಂದು ಎಸ್ಪಿ ತಿಳಿಸಿದ್ದಾರೆ.

ಕಳ್ಳಸಾಗಣೆ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


Share with

Leave a Reply

Your email address will not be published. Required fields are marked *