ಹೈದರಾಬಾದ್: ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಲ್ಲ ಬೃಹತ್ ಕಲಬೆರಕೆ ಜಾಲವೊಂದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ನಗರದ ಕಟ್ಟೆದನ್ ಪ್ರದೇಶದಲ್ಲಿರುವ ‘ಎಸ್‌ಕೆಆರ್ ಫುಡ್ ಪ್ರಾಡಕ್ಟ್’ ಎಂಬ ಘಟಕದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಸುಮಾರು 4,032 ಕೆಜಿ ಕಲಬೆರಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ವಶಪಡಿಸಿಕೊಂಡಿದ್ದಾರೆ.
ಹೈದರಾಬಾದ್ ನಗರ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋಗಳಲ್ಲಿ, ಅತ್ಯಂತ ಕೊಳಕು ಮತ್ತು ಅಶುಚಿಯಾದ ಜಾಗದಲ್ಲಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ತಯಾರಿಸುತ್ತಿರುವುದು ಕಂಡುಬಂದಿದೆ. ಬೆಳ್ಳುಳ್ಳಿಯನ್ನು ನೆಲದ ಮೇಲೆ ರಾಶಿ ಹಾಕಿರುವುದು ಅಚ್ಚರಿ ಮೂಡಿಸಿದೆ.
ಕಲಬೆರಕೆ ದಂಧೆ: ಈ ಘಟಕದಲ್ಲಿ ಗುಣಮಟ್ಟವಿಲ್ಲದ ಕಚ್ಚಾ ವಸ್ತುಗಳ ಜೊತೆಗೆ ಅಸಿಟಿಕ್ ಆಸಿಡ್ (Acetic acid), ಕ್ಸಾಂತನ್ ಗಮ್ (Xanthan gum) ನಂತಹ ರಾಸಾಯನಿಕಗಳನ್ನು ಬಳಸಿ ಪೇಸ್ಟ್ ತಯಾರಿಸಲಾಗುತ್ತಿತ್ತು. ಇದನ್ನು ಹೋಟೆಲ್‌ಗಳು ಮತ್ತು ಚಿಲ್ಲರೆ ಅಂಗಡಿಗಳಿಗೆ ಸರಬರಾಜು ಮಾಡಲಾಗುತ್ತಿತ್ತು.
ಪೊಲೀಸರು ದಾಳಿಯ ವೇಳೆ ಒಟ್ಟು 22 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇದರಲ್ಲಿ 4,032 ಕೆಜಿ ಸಿದ್ಧಪಡಿಸಿದ ಪೇಸ್ಟ್ ಹಾಗೂ 6,210 ಕೆಜಿ ಕಳಪೆ ಗುಣಮಟ್ಟದ ಕಚ್ಚಾ ವಸ್ತುಗಳು ಸೇರಿವೆ.
ಈ ಅಕ್ರಮ ಘಟಕದ ಮಾಲೀಕ ಹಸನ್ ಅಲಿ ರೂಪಾನಿ (55) ಎಂಬಾತನನ್ನು ಬಂಧಿಸಲಾಗಿದೆ. ಈತನನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಮೈಲಾರ್ದೇವಪಲ್ಲಿ ಪೊಲೀಸರಿಗೆ ಒಪ್ಪಿಸಲಾಗಿದೆ.
ಹೆಚ್ಚುತ್ತಿರುವ ಆತಂಕ: ಹೈದರಾಬಾದ್‌ನಲ್ಲಿ ಇಂತಹ ಘಟನೆಗಳು ಪದೇ ಪದೇ ವರದಿಯಾಗುತ್ತಿವೆ. ಕಳೆದ ಮಾರ್ಚ್‌ನಲ್ಲಿ ಬೋರಬಂಡಾ ಮತ್ತು ಮಲ್ಲೇಪಲ್ಲಿ ಪ್ರದೇಶಗಳಲ್ಲೂ ಇಂತಹದ್ದೇ ದಾಳಿಗಳು ನಡೆದು ಟನ್ ಗಟ್ಟಲೆ ಕಲಬೆರಕೆ ಪೇಸ್ಟ್ ವಶಪಡಿಸಿಕೊಳ್ಳಲಾಗಿತ್ತು.




