
ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ (High Blood Pressure) ಪ್ರಕರಣಗಳು ಹೆಚ್ಚುತ್ತಿದೆ. ಜನರು ಈ ಬಗ್ಗೆ ಹೆಚ್ಚಿನ ಗಮನವಹಿಸದಿರುವುದು ಈ ರೀತಿಯ ಆರೋಗ್ಯ (Health) ಸಮಸ್ಯೆಗಳ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ. ಹಾಗಾಗಿಯೇ ಹಾರ್ವರ್ಡ್ ವೈದ್ಯರು (Harvard Doctors) ರಕ್ತದೊತ್ತಡವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಪೂರಕವಾದ ಆಹಾರಗಳ ಬಗ್ಗೆ ಮಾಹಿತಿ ನೀಡಿದ್ದು, ಯಾರಿಗೂ ತಿಳಿಯದಂತೆ ಹೆಚ್ಚುತ್ತಿರುವ ಈ ಗಂಭೀರ ಕಾಯಿಲೆ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ. ಸಾಮಾನ್ಯವಾಗಿ ಮಾರಣಾಂತಿಕ ಕಾಯಿಲೆಗಳನ್ನು ದೂರವಿಡಲು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದು ಬಹಳ ಮುಖ್ಯವಾಗುತ್ತದೆ. ಹಾಗಾಗಿ ವ್ಯಾಯಾಮ ಮತ್ತು ಇನ್ನಿತರ ಆರೋಗ್ಯಕರ ಅಭ್ಯಾಸಗಳ (Healthy habit) ಜೊತೆಗೆ ಕೆಲವು ಆಹಾರಗಳ ಸೇವನೆ ಮಾಡುವುದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗಾದರೆ ಆ ಆಹಾರಗಳು ಯಾವವು ಎಂಬುದನ್ನು ತಿಳಿದುಕೊಳ್ಳಿ.
ಅಧಿಕ ರಕ್ತದೊತ್ತಡ ಪಾರ್ಶ್ವವಾಯು, ಹೃದಯ ಕಾಯಿಲೆ, ಮೂತ್ರಪಿಂಡ ಕಾಯಿಲೆ ಮತ್ತು ಇತರ ಗಂಭೀರ ಕಾಯಿಲೆಗಳಿಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ. ಹಾಗಾಗಿ ಈ ಆರೋಗ್ಯ ಸಮಸ್ಯೆಯ ನಿಯಂತ್ರಣ ಮಾಡುವುದು ಬಹಳ ಅನಿವಾರ್ಯವಾಗಿದೆ. ಹಾಗಾಗಿಯೇ ಡಾ. ಸೌರಭ್ ಸೇಥಿ, ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುವ ಹಣ್ಣುಗಳ ಬಗ್ಗೆ ತಿಳಿಸಿದ್ದು, ಈ ಆಹಾರ ಔಷಧಿಗಳಿಗೆ ಪರ್ಯಾಯವಲ್ಲದಿದ್ದರೂ ಕೂಡ ಇವು ಖಂಡಿತವಾಗಿಯೂ ರಕ್ತದೊತ್ತಡ ಸಮಸ್ಯೆಯ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.
ಬಾಳೆಹಣ್ಣು
ಪ್ರತಿನಿತ್ಯ ನಾವು ಸೇವನೆ ಮಾಡುವ ಬಾಳೆಹಣ್ಣುಗಳಲ್ಲಿ ಪೊಟ್ಯಾಸಿಯಮ್ ಪ್ರಮಾಣ ಅಧಿಕವಾಗಿದ್ದು, ಇದು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ನಿರ್ಣಾಯಕವಾಗಿದೆ. ಅಧಿಕ ರಕ್ತದೊತ್ತಡಕ್ಕೆ ಪ್ರಮುಖ ಕಾರಣವಾಗುವ ಹೆಚ್ಚುವರಿ ಸೋಡಿಯಂ ಅನ್ನು ಮೂತ್ರಪಿಂಡಗಳು ಹೊರಹಾಕಲು ಪೊಟ್ಯಾಸಿಯಮ್ ಸಹಾಯ ಮಾಡುತ್ತದೆ. ಹಾಗಾಗಿ ಇವುಗಳನ್ನು ನೀವು ನಿಮಗೆ ಬೇಕಾದ ರೀತಿಯ ಆಹಾರಗಳಲ್ಲಿ ಬಳಕೆ ಮಾಡಬಹುದು. ಸ್ಮೂಥಿ ಅಥವಾ ದಿನನಿತ್ಯ ತಿಂಡಿಯಲ್ಲಿ ಸೇವನೆ ಮಾಡುವ ಮೂಲಕ ಪೋಷಕಾಂಶವನ್ನು ಪಡೆದುಕೊಳ್ಳಬಹುದು.ಡಾರ್ಕ್ ಚಾಕೊಲೇಟ್
ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದ ಗಂಭೀರ ಕಾಯಿಲೆಗಳು ಬರುವುದನ್ನು ಡಾರ್ಕ್ ಚಾಕೊಲೇಟ್ ತಡೆಯುತ್ತದೆ. ಇದರ ನಿಯಮಿತ ಸೇವನೆಯಿಂದ ಮೆಗ್ನೀಸಿಯಮ್ ಮತ್ತು ಫ್ಲಾವನಾಲ್‌ಗಳು ಸಿಗುತ್ತವೆ. ಜೊತೆಗೆ ರಕ್ತನಾಳಗಳನ್ನು ಸಡಿಲಗೊಳಿಸುವ ನೈಟ್ರಿಕ್ ಆಕ್ಸೈಡ್ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು. ಡಾರ್ಕ್ ಚಾಕೊಲೇಟ್‌ನಂತಹ ಫ್ಲಾವನಾಲ್- ಭರಿತ ಕೋಕೋ ಉತ್ಪನ್ನಗಳು ಅಧಿಕ ರಕ್ತದೊತ್ತಡವನ್ನು ಸಾಧಾರಣವಾಗಿ ಕಡಿಮೆ ಮಾಡುತ್ತದೆ. ಆದರೆ 70% ಕೋಕೋ ಅಂಶವಿರುವ ಡಾರ್ಕ್ ಚಾಕೊಲೇಟ್ ಅನ್ನು ಆರಿಸಿಕೊಳ್ಳಿ ಅದನ್ನು ಮಿತವಾಗಿ ಸೇವಿಸಲು ಮರೆಯಬೇಡಿ.
ಬೀಟ್ರೂಟ್
ಒಟ್ಟಾರೆ ಆರೋಗ್ಯಕ್ಕೆ ಕಾಪಾಡಲು ಬೀಟ್ರೂಟ್ ಒಂದು ಉತ್ತಮ ಆಹಾರವಾಗಿದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ನೈಟ್ರೇಟ್‌ಗಳನ್ನು ದೇಹವು ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತಿಸುತ್ತದೆ, ಇದು ರಕ್ತನಾಳಗಳನ್ನು ಹಿಗ್ಗಿಸುತ್ತದೆ ಮತ್ತು ರಕ್ತದ ಹರಿವನ್ನು ಸುಧಾರಿಸುತ್ತದೆ. ನೀವು ಇವುಗಳನ್ನು ಸಲಾಡ್, ಜ್ಯೂಸ್ ಅಥವಾ ಸ್ಮೂಥಿಗಳಲ್ಲಿ ಬಳಕೆ ಮಾಡಬಹುದು. ಅಲ್ಲದೆ ಹುರಿದ ಬೀಟ್ರೂಟ್ ಅಥವಾ ಬೀಟ್ರೂಟ್ ಪುಡಿಯನ್ನು ಸಹ ಬಳಕೆ ಮಾಡಬಹುದಾಗಿದೆ.
ದಾಳಿಂಬೆ
ರಕ್ತದ ಬಣ್ಣದಲ್ಲಿರುವ ದಾಳಿಂಬೆ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದು ಹೃದಯರಕ್ತನಾಳದ ಆರೋಗ್ಯವನ್ನು ಒಟ್ಟಾರೆಯಾಗಿ ಸುಧಾರಿಸುತ್ತದೆ. ಹಾಗಾಗಿ ದಾಳಿಂಬೆ ರಸವನ್ನು ನಿಯಮಿತವಾಗಿ ಸೇವನೆ ಮಾಡಿ ಅಥವಾ ಇನ್ನಿತರ ಆಹಾರಗಳಲ್ಲಿ ಬಳಕೆ ಮಾಡಿ.ಶುಂಠಿ
ಹಲವು ಆಹಾರ ಪದಾರ್ಥಗಳಿಗೆ ಪ್ರಧಾನವಾಗಿ ಬೇಕಾಗಿರುವ ಶುಂಠಿಯು ನೈಸರ್ಗಿಕ ಕ್ಯಾಲ್ಸಿಯಂ ಆಗಿ ಕಾರ್ಯನಿರ್ವಹಿಸುತ್ತದೆ, ಇದು ರಕ್ತನಾಳಗಳಿಗೆ ವಿಶ್ರಾಂತಿ ನೀಡಿ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಹೃದಯರಕ್ತನಾಳದ ಆರೋಗ್ಯ ಸುಧಾರಿಸುತ್ತದೆ. ಇವುಗಳನ್ನು ಚಹಾ, ಸ್ಮೂಥಿ ಅಥವಾ ಇನ್ನಿತರ ಆಹಾರಗಳಲ್ಲಿ ಬಳಕೆ ಮಾಡಬಹುದು. ಇದು ಆರೋಗ್ಯಕ್ಕೆ ಒಳ್ಳೆಯದಾದರೂ ಕೂಡ ಮಿತವಾಗಿ ಸೇವನೆ ಮಾಡುವುದನ್ನು ಮರೆಯಬೇಡಿ. ಏಕೆಂದರೆ ಅತಿಯಾದ ಸೇವನೆಯು ಕೆಲವು ವ್ಯಕ್ತಿಗಳಲ್ಲಿ ಜೀರ್ಣಕಾರಿ ಅಸ್ವಸ್ಥತೆಯನ್ನು ಉಂಟುಮಾಡಬಹುದು.