ಬೆಂಗಳೂರು, ಡಿಸೆಂಬರ್ 5: ಬೆಂಗಳೂರು (Bengaluru) ಸೇರಿದಂತೆ ದೇಶಾದ್ಯಂತ ಹಲವು ವಿಮಾನ ನಿಲ್ದಾಣಗಳಲ್ಲಿ ಇಂಡಿಗೋ ವಿಮಾನಗಳ (IndiGo flights) ಸಂಚಾರದಲ್ಲಿ ವ್ಯತ್ಯವಾಗಿ ಸತತ ಮೂರನೇ ದಿನವೂ ಪ್ರಯಾಣಿಕರು ಪರದಾಡುವಂತಾಗಿದೆ. ಗುರುವಾರ ಒಂದೇ ದಿನ ಬರೋಬ್ಬರಿ 550 ವಿಮಾನಗಳ ಸಂಚಾರ ರದ್ದಾಗಿದೆ. ಸಿಬ್ಬಂದಿಯ ಕೊರತೆಯಿಂದಾಗಿ ಇಂಡಿಗೋ ದೇಶೀಯ, ಅಂತಾರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಬ್ರೇಕ್ ಹಾಕಿದೆ. ಇದರಿಂದ ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ಒಂದರಲ್ಲೇ ಒಟ್ಟು 205 ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿದೆ. ಕಳೆದ 3 ದಿನಗಳಿಂದ ಈ ಸಮಸ್ಯೆ ಆಗುತ್ತಿದ್ದು, ಸಾವಿರಾರು ಪ್ರಯಾಣಿಕರು ಪರದಾಡಿದ್ದಾರೆ.
ಚಂಡೀಗಢದಲ್ಲಿ ಕನ್ನಡಿಗರ ಪರದಾಟ
ಇಂಡಿಗೋ ವಿಮಾನಗಳ ಹಾರಾಟದಲ್ಲಿ ವಿಳಂಬ ಆಗಿದ್ದರಿಂದ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕನ್ನಡಿಗರು ಪರದಾಡಿದರು. ಬೆಂಗಳೂರಿಗೆ ಬರಲಾಗದೇ 20 ಕನ್ನಡಿಗರು ಒದ್ದಾಡುವಂತಾಯಿತು. ಗಂಟೆಗಟ್ಟಲೇ ವಿಮಾನ ನಿಲ್ದಾಣದಲ್ಲೇ ಕಾದು ಕುಳಿತ ದೃಶ್ಯಗಳು ಕಂಡುಬಂದಿವೆ.
ವಿಮಾನದೊಳಗೆ ಪ್ರಯಾಣಿಕರು ಲಾಕ್! ಆಕ್ರೋಶ
ಅನೇಕ ಪ್ರಯಾಣಿಕರನ್ನು ವಿಮಾನಕ್ಕೆ ಹತ್ತಿಸಿಕೊಂಡ ಬಳಿಕ ಪ್ರಯಾಣ ವಿಪರೀತ ವಿಳಂಬ ಮಾಡಿದ ಘಟನೆಯೂ ನಡೆಯಿತು, ವಿಮಾನದೊಳಗೆ ಲಾಕ್ ಆದ ಪ್ರಯಾಣಿಕರು, ಇಂಡಿಗೋ ವಿಮಾನ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಳ್ಳು ಹೇಳಿ ನಮ್ಮ ಸಮಯ ಹಾಳು ಮಾಡುತ್ತಿದ್ದಾರೆ. ಮತ್ತೊಂದೆಡೆ, ತಾವು ಪ್ರಯಾಣಿಸಬೇಕಿದ್ದ ವಿಮಾನ ರದ್ದಾದ ಬಗ್ಗೆ ಮೊದಲೇ ಮಾಹಿತಿ ನೀಡಿಲ್ಲ ಎಂದು ಮಹಿಳಾ ಪ್ರಯಾಣಿಕರೊಬ್ಬರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ವಿಮಾನಗಳು ರದ್ದಾಗಿದ್ದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಖನೌ ಏರ್ಪೋರ್ಟ್ನಲ್ಲಿ ಘೋಷಣೆ ಕೂಗಿದ್ದಾರೆ. ಪುಣೆ, ದೆಹಲಿ ಸೇರಿದಂತೆ ಅನೇಕ ಕಡೆ ಪ್ರಯಾಣಿಕರು ಏರ್ಲೈನ್ಸ್ ವಿರುದ್ಧ ಪ್ರತಿಭಟಿಸಿದ್ದಾರೆ.
ಇಂಡಿಗೋ ವಿಮಾನಗಳ ಸಂಚಾರ ರದ್ದಾಗಲು ಕಾರಣವೇನು?
ಇಂಡಿಗೋ ವಿಮಾನಗಳು ರದ್ದಾಗಲು ಮುಖ್ಯ ಕಾರಣ, ಏರ್ಲೈನ್ ಸಂಸ್ಥೆಯು ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿಯ ತೀವ್ರ ಕೊರತೆ ಎದುರಿಸುತ್ತಿರುವುದು. ಅಲ್ಲದೆ, ಅನೇಕ ಕಾರ್ಯಾಚರಣೆಯ ಸವಾಲುಗಳನ್ನೂ ಎದುರಿಸುತ್ತಿದೆ ಎನ್ನಲಾಗಿದೆ. ಕೆಲವು ವಿಮಾನ ನಿಲ್ದಾಣಗಳಲ್ಲಿ ಪ್ರತಿಕೂಲ ಹವಾಮಾನ ಎದುರಿಸುತ್ತಿರುವುದರಿಂದಲೂ ಹಾರಾಟ ವಿಳಂಬವಾಗುತ್ತಿದೆ.
ದಿಢೀರ್ ಪೈಲಟ್ ಕೊರತೆ ಆಗಿದ್ದೇಕೆ?
ನಾಗರಿಕ ವಿಮಾನಯಾನ ನಿರ್ದೇಶನಾಲಯವು ನವೆಂಬರ್ 1 ರಂದು ವಿಮಾನ ಕರ್ತವ್ಯ ಸಮಯದ ಮಿತಿಗೆ ಸಂಬಂಧಿಸಿದ ಪರಿಷ್ಕೃತ ಮಾನದಂಡಗಳನ್ನು ಬಿಡುಗಡೆ ಮಾಡಿತ್ತು. ಅದರಂತೆ, ಪೈಲಟ್‌ಗಳಿಗೆ ಹೆಚ್ಚಿನ ವಿಶ್ರಾಂತಿ ಸಮಯವನ್ನು ನೀಡುವುದು ಕಡ್ಡಾಯವಾಗಿದೆ. ಅಲ್ಲದೆ, ಪೈಟಲ್ಗಳ ಆಯಾಸವನ್ನು ಕಡಿಮೆ ಮಾಡಿ ಸುರಕ್ಷತೆ, ದಕ್ಷತೆಯನ್ನು ಸುಧಾರಿಸಲು ರಾತ್ರಿಯ ಕಾರ್ಯಾಚರಣೆಗಳನ್ನು (ಉದಾಹರಣೆಗೆ. ರಾತ್ರಿ ಲ್ಯಾಂಡಿಂಗ್ ಅನ್ನು ಎರಡಕ್ಕೆ ಸೀಮಿತಗೊಳಿಸುವುದು) ಮಿತಿಗೊಳಿಸಬೇಕಿದೆ. ಇದರಿಂದಾಗಿ ಏಕಾಏಕಿ ಪೈಲಟ್ ಕೊರತೆ ಎದುರಿಸುವಂಥ ಅನಿವಾರ್ಯತೆ ಸೃಷ್ಟಿಯಾಯಿತು.





