ಕೊಂಡೆವೂರು: ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠ ಕೊಂಡೆವೂರಿನಲ್ಲಿ ಆ.15 ರಂದು 78 ನೇ ಸ್ವಾತಂತ್ರ್ಯ ದಿನಾಚರಣೆ ಹಮ್ಮಿಕೊಳ್ಳಲಾಯಿತು.
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತವಾಗಿ ಬೆಳಿಗ್ಗೆ 9.30 ಕ್ಕೆ ವಿದ್ಯಾಪೀಠದ ಸಂಸ್ಥಾಪಕರಾದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ದ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು “ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಸ್ಮರಿಸಿ ಗೌರವಿಸುವುದು ನಮ್ಮ ಕರ್ತವ್ಯವಾಗಿದೆ, ವಿದೇಶಿಯರ ಆಳ್ವಿಕೆಯ ಕಾಲದಲ್ಲಿ ನಮ್ಮ ದೇಶದ ಸ್ಥಿತಿಗತಿಯ ಬಗ್ಗೆ ಹೇಳಿದರಲ್ಲದೆ ನಮ್ಮ ದೇಶವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವಲ್ಲಿ ಎಲ್ಲರೂ ಶ್ರಮಿಸಬೇಕೆಂದು, ಸ್ವಾತಂತ್ರ ಸ್ವಾತಂತ್ರ್ಯ ದಿನಾಚರಣೆಯ ಶುಭವನ್ನು ಹಾರೈಸಿ ಆಶೀರ್ವದಿಸಿದರು”. ಬಳಿಕ ವಿದ್ಯಾಪೀಠದಿಂದ ಭಾರತೀಯ ವಿದ್ಯಾನಿಕೇತನ ಸಂಸ್ಥೆಯು ಜಿಲ್ಲಾ ಮಟ್ಟದಲ್ಲಿ ನಡೆಸಲಾದ ಆಟೋಟ ಸ್ಪರ್ದೆಯಲ್ಲಿ ವಿಜೇತರಾದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬಹುಮಾನಗಳನ್ನು ವಿತರಿಸಿದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರಹಾಸ ಶೆಟ್ಟಿ ಅವರು ಪ್ರಾರ್ಥನಾ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು “ನಮ್ಮ ದೇಶವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಎಲ್ಲರೂ ಶ್ರಮಿಸಬೇಕೆಂದು ಕರೆ ನೀಡಿದರು”.
ಮುಖ್ಯ ಅತಿಥಿಗಳಾಗಿ ಶಾಲಾ ಆಡಳಿತ ಸಮಿತಿಯ ಸದಸ್ಯರಾದ ಶ್ರೀ ಸುಧಾಕರ ಎನ್ ಮತ್ತು ಶ್ರೀಮತಿ ಜಯಲಕ್ಷ್ಮಿ ಕಾರಂತ್ ಅವರು ದೀಪ ಪ್ರಜ್ವಲನೆ ಮಾಡಿ ಸ್ವಾತಂತ್ರ್ಯ ದಿನದ ಮಹತ್ವವನ್ನು ತಿಳಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ವಿದ್ಯಾಪೀಠದ ಪ್ರಾಂಶುಪಾಲೆ ಶ್ರೀಮತಿ ರೇಖಾ ಪ್ರದೀಪ್, ಮಾತೃ ಸಮಿತಿಯ ಅಧ್ಯಕ್ಷೆಯಾದ ಶ್ರೀಮತಿ ಪ್ರೇಮ, ಶಿಶುವಾಟಿಕಾ ಸಮಿತಿಯ ಅಧ್ಯಕ್ಷರಾದ ಶ್ರೀ ರಾಕೇಶ್ ಮತ್ತು ಶಿಶುವಾಟಿಕಾ ಮಾತೃಸಮಿತಿಯ ಅಧ್ಯಕ್ಷೆಯಾದ ಶ್ರೀಮತಿ ಮಾಲತಿದೇವಿ ದಿನದ ಮಹತ್ವವನ್ನು ತಿಳಿಸುತ್ತಾ ಶುಭ ಹಾರೈಸಿದರು.
ಬಳಿಕ ಮಕ್ಕಳು ಭಾಷಣ ಹಾಗೂ ದೇಶ ಭಕ್ತಿಗೀತೆಗಳನ್ನು ಪ್ರಸ್ತುತ ಪಡಿಸಿದರು. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ವಿದ್ಯಾಪೀಠದಲ್ಲಿ ನಡೆಸಲಾದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಭಾಧ್ಯಕ್ಷರು ಹಾಗೂ ಅತಿಥಿಗಳಿಂದ ಬಹುಮಾನಗಳನ್ನು ವಿತರಿಸಲಾಯಿತು. ರಾಷ್ಟ್ರ ಗೀತೆಯೊಂದಿಗೆ ಸಭೆ ಮುಕ್ತಾಯವಾಯಿತು. ಕಾರ್ಯಕ್ರಮದ ನಿರೂಪಣೆ, ಸ್ವಾಗತ, ಧನ್ಯವಾದವನ್ನು ವಿದ್ಯಾಪೀಠದ ಮಕ್ಕಳು ನೆರವೇರಿಸಿ ಮೆಚ್ಚುಗೆಗಳಿಸಿದರು. ಎಲ್ಲರಿಗೂ ಸಿಹಿ ತಿಂಡಿಯನ್ನು ವಿತರಿಸಲಾಯಿತು.