ಉಡುಪಿ: ಅಂಗನವಾಡಿ ಕಾರ್ಯಕರ್ತರು, ಬಿಸಿಯೂಟ ನೌಕರರು ಬಹುಕಾಲದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎರಡೂ ಸಂಘಟನೆಗಳ ನೌಕರರು ಜ.23ರಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯೆ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುಶೀಲ ನಾಡ ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.23ರಂದು ದೇಶಾದ್ಯಂತ ಎಲ್ಲಾ ಸಂಸದರ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಯಲಿದೆ. ಕರ್ನಾಟಕದಲ್ಲೂ ಎಲ್ಲಾ 28 ಸದಸ್ಯರ ಕಚೇರಿ ಎದುರು ಧರಣಿ ನಡೆಸಲಿದ್ದೇವೆ. ಅಂದು ಬೆಳಗ್ಗೆ 10ಗಂಟೆಯಿಂದ 24ರ ಮುಂಜಾನೆ 5:00ಗಂಟೆಯವರೆಗೆ ನಮ್ಮ ನಿರಂತರ ಧರಣಿ ನಡೆಯಲಿದೆ. ಎಲ್ಲಾ ಮಹಿಳೆಯರು ರಾತ್ರಿಯನ್ನು ಸಂಸದರ ಕಚೇರಿ ಎದುರು ಕಳೆಯಲಿದ್ದಾರೆ ಎಂದರು.
ಸಿಐಟಿಯು ಜಿಲ್ಲಾ ಉಪಾದ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಅಂಗನವಾಡಿ, ಬಿಸಿಯೂಟ ನೌಕರರ ಪ್ರತಿಭಟನಾ ಧರಣಿಗೆ ತಮ್ಮ ಸಂಘಟನೆ ಬೆಂಬಲ ನೀಡುತ್ತಿದೆ. ಇದರ ಮುಂದುವರಿದ ಭಾಗವಾಗಿ ಜನವರಿ 24ರಂದು ಸಂಘಟಿತ ಕಾರ್ಮಿಕರ (ಹೆಂಚು, ಗೇರುಬೀಜ ಕಾರ್ಖಾನೆ, ಬೀಡಿ ಕಾರ್ಮಿಕರು) ಧರಣಿ ನಡೆದರೆ, 25ರಂದು ಅಸಂಘಟಿತರ ಧರಣಿ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಭಾರತಿ, ಜಿಲ್ಲಾ ಉಪಾಧ್ಯಕ್ಷೆ ಜಿ.ಪ್ರೇಮಾ, ಅಕ್ಷರದಾ ಸೋಹ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಂದಾ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಕವಿರಾಜ್ ಉಪಸ್ಥಿತರಿದ್ದರು.