ಉಡುಪಿ: ಭಾರತ್ ಜೋಡೊ ಯಾತ್ರೆ ಮೇಲೆ ಬಿಜೆಪಿಯವರು ನಡೆಸಿದ ದಾಳಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆರೋಪಿಸಿದ್ದಾರೆ.
ಅಸ್ಸಾಂನಲ್ಲಿ ಬಿಜೆಪಿ ಕಾರ್ಯಕರ್ತರು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜ.23ರಂದು ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಸರ್ವಾಧಿಕಾರಿ ಧೋರಣೆಯ ಮೂಲಕ ವಿರೋಧ ಪಕ್ಷವನ್ನು ಹತ್ತಿಕ್ಕುವ ಕಾರ್ಯವನ್ನು ಬಿಜೆಪಿ ನಡೆಸುತ್ತಿದೆ. ಈ ಮೂಲಕ ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದೆ. ನ್ಯಾಯಾಲಯ, ಸಿಬಿಐ, ಚುನಾವಣಾ ಆಯೋಗ, ಇಡಿಗಳನ್ನು ದುರುಪಯೋಗ ಮಾಡಿಕೊಂಡು ವಿರೋಧ ಪಕ್ಷವನ್ನು ಹತ್ತಿಕ್ಕುವ ಕಾರ್ಯವನ್ನು ಕೇಂದ್ರ ಬಿಜೆಪಿ ಸರಕಾರ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಜನಬೆಂಬಲದಿಂದ ಭಯಭೀತರಾದ ಬಿಜೆಪಿ ಭಾರತ್ ಜೋಡೊ ಯಾತ್ರೆಯ ಮೇಲೆ ದಾಳಿ ನಡೆಸುತ್ತಿದೆ ಎಂದು ದೂರಿದರು.
ಕೆಪಿಪಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಕಾಂಗ್ರೆಸ್ ಮುಖಂಡ ರಾದ ಪ್ರಸಾದ್‌ರಾಜ್ ಕಾಂಚನ್, ನೀರೆ ಕೃಷ್ಣ ಶೆಟ್ಟಿ ಮಾತನಾಡಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು, ದಿವಾಕರ್ ಕುಂದರ್, ಅಮೃತ್ ಶೆಣೈ, ರಮೇಶ್ ಕಾಂಚನ್, ವರೋನಿಕಾ ಕರ್ನೆಲಿಯೋ, ದಿನೇಶ್ ಪುತ್ರನ್, ಭಾಸ್ಕರ ರಾವ್ ಕಿದಿಯೂರು, ಇಸ್ಮಾಯಿಲ್ ಆತ್ರಾಡಿ, ಲೂವಿಸ್ ಲೋಬೊ, ಶೇಕ್ ವಹೀದ್, ಶಬ್ಬೀರ್ ಉಡುಪಿ, ಹಬೀಬ್ ಅಲಿ, ಗೀತಾ ವಾಗ್ಳೆ, ಎಂ.ಪಿ.ಮೊದಿನಬ್ಬ, ಹರೀಶ್ ಶೆಟ್ಟಿ, ಶಂಕರ್ ಕುಂದರ್, ಹರೀಶ್ ಕಿಣಿ, ಕೀರ್ತಿ ಶೆಟ್ಟಿ, ಮಹಾಬಲ ಕುಂದರ್, ನರಸಿಂಹ ಮೂರ್ತಿ, ಜ್ಯೋತಿ ಹೆಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು.