ಕುಂದಾಪುರ: ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಅವರ ಸಮ್ಮುಖದಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಮುಖಂಡರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಕುಂದಾಪುರ ಆರ್.ಎನ್. ಶೆಟ್ಟಿ ಭವನದಲ್ಲಿ ಜ.26ರಂದು ನಡೆದಿದೆ.
ಸಭೆಯಲ್ಲಿ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು, ಚುನಾವಣೆ ಸಮಯದಲ್ಲಿ ಮಾತ್ರ ನಿಮಗೆ ಕಾರ್ಯಕರ್ತರ ನೆನಪಾಗುತ್ತದೆ. ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇದೇ ಕಾರಣ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಮತ್ತೆ ಮತ್ತೆ ಸೋಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
ಕಾಂಗ್ರೆಸ್ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಕಾರ್ಯಕರ್ತರೊಬ್ಬರು, ಇವತ್ತು ಬೂತ್‌ನಲ್ಲಿ ಒಬ್ಬ ಕಾರ್ಯಕರ್ತ ಇದ್ದಾನೋ ಸತ್ತಿಸದ್ದಾನೋ ಎಂಬುದನ್ನು ನಾಯಕರು ಕೇಳಿಲ್ಲ ಎಂದು ಗುಡುಗಿದರು. ಕಾರ್ಯಕರ್ತರ ನೋವು-ನಲಿವುಗಳನ್ನು ನೀವು ನಾಯಕರಾದವರು ಕೇಳುತ್ತಿಲ್ಲ. ಕುಂದಾಪುರದಲ್ಲಿರುವ ಎಲ್ಲ ಕಾರ್ಯಕರ್ತರು ಪಕ್ಷಕ್ಕಾಗಿ ಶ್ರಮ ವಹಿಸಿ ದುಡಿದಿದ್ದೇವೆ. ಅದರೂ ನಮ್ಮ ಸಂಕಷ್ಟಗಳನ್ನು ಕೇಳುವವರು ಯಾರು ಇಲ್ಲ ಎಂದು ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.
ಒಂದು ಕಡೆ ಕಾರ್ಯಕರ್ತರು ಆಕ್ರೋಶ ಹೊರಹಾಕಿದರೆ, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮೌನಕ್ಕೆ ಜಾರಿದರು. ಈ ಸಂದರ್ಭದಲ್ಲಿ ಮುಜುಗರ ತಪ್ಪಿಸಿಕೊಳ್ಳಲು ಮಾಧ್ಯಮ ಪ್ರತಿನಿಧಿಗಳ ಬಳಿ ಬಂದ ಕೆಲವು ಮುಖಂಡರು, ಇದು ಕಾರ್ಯಕರ್ತರ ಸಭೆ ದಯವಿಟ್ಟು ಹೊರಗೆ ಹೋಗಿ ಎಂದು ವಿನಂತಿಸಿದ್ದಾರೆ. ಆದರೂ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದವರನ್ನು ಬಲವಂತದಿಂದ ಹೊರಗೆ ದಬ್ಬಲು ಮುಂದಾಗಿದ್ದಾರೆ. ಅಷ್ಟರಲ್ಲಿ ಸಭೆಯಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು.