ಉಡುಪಿ: ರಕ್ತದ ಬಣ್ಣ ಒಂದೇ ಅದಕ್ಕೆ ಜಾತಿ ಧರ್ಮಗಳ ಭೇದವಿಲ್ಲ: ಡೆನಿಸ್ ಡೆಸಾ; ಸಮನ್ವಯ ಸರ್ವ ಧರ್ಮ ಸೌಹಾರ್ದ ಸಮಿತಿ ತೊಟ್ಟಂ ಹಾಗೂ ಇತರ ಸಹಭಾಗಿ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

Share with

ಉಡುಪಿ: ರಕ್ತದಾನಕ್ಕಿಂತ ಮಹತ್ತರವಾದ ದಾನ ಇನ್ನೊಂದಿಲ್ಲ. ಪ್ರತಿಯೊಬ್ಬರ ರಕ್ತದ ಬಣ್ಣ ಒಂದೇ ಆಗಿದ್ದು ರಕ್ತಕ್ಕೆ ಯಾವುದೇ ಜಾತಿ ಧರ್ಮಗಳಿಲ್ಲ ಎಂದು ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಧರ್ಮಗುರು ಡೆನಿಸ್ ಡೆಸಾ ಹೇಳಿದರು.

ಶ್ರೀ ಗಜಾನನ ಯಕ್ಷಗಾನ ಕಲಾ ಸಂಘದ ಸಭಾಂಗಣದಲ್ಲಿ ಆಯೋಜಿಸಲಾದ ಸ್ವಯಂ ಪ್ರೇರಿತ ಬೃಹತ್ ರಕ್ತಾದಾನ ಶಿಬಿರ

ಅವರು ಸಮನ್ವಯ ಸರ್ವ ಧರ್ಮ ಸೌಹಾರ್ದ ಸಮಿತಿ ತೊಟ್ಟಾಮ್ ಇವರ ನೇತ್ರತ್ವದಲ್ಲಿ ಶ್ರೀ ಗಜಾನನ ಯಕ್ಷಗಾನ ಕಲಾ ಸಂಘ ತೊಟ್ಟಾಮ್ ಮತ್ತು ರಕ್ತ ನಿಧಿ ಕೇಂದ್ರ, ಜಿಲ್ಲಾ ಆಸ್ಪತ್ರೆ , ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ಶ್ರೀ ಭಕ್ತಿ ಉದಯ ಪಂಡರೀನಾಥ ಭಜನಾ ಮಂದಿರ ತೊಟ್ಟಾಮ್, ಸೈಂಟ್ ಆನ್ಸ್ ಚರ್ಚ್ ತೊಟ್ಟಾಮ್, ಜೀವ ಸಂಜೀವಿನಿ ರಕ್ತದಾನ ಬಳಗ ಉಡುಪಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ತೊಟ್ಟಾಮ್, ಶ್ರೀ ಪಂಡರಿನಾಥ ವಿಠೋಬ ಭಜನ ಮಂದಿರ ಬಡಾನಿಡಿಯೂರು, ಜಾಮಿಯ ಮಸೀದಿ ಮಲ್ಪೆ, ನಾರಾಯಣಗುರು ಬಿಲ್ಲವ ಸಂಘ ಬಡಾನಿಡಿಯೂರು, ರಿಕ್ಷಾ ನಿಲ್ದಾಣ ಬಡಾನಿಡಿಯೂರು ಹಾಗೂ ಇತರ ಸ್ಥಳಿಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಶ್ರೀ ಗಜಾನನ ಯಕ್ಷಗಾನ ಕಲಾ ಸಂಘದ ಸಭಾಂಗಣದಲ್ಲಿ ಆಯೋಜಿಸಲಾದ ಸ್ವಯಂ ಪ್ರೇರಿತ ಬೃಹತ್ ರಕ್ತಾದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಬೃಹತ್ ರಕ್ತಾದಾನ ಶಿಬಿರ ಉದ್ಘಾಟನೆ

ಮನುಕುಲವನ್ನು ಕಾಪಾಡುವುದಕ್ಕಾಗಿ ಭಗವಂತು ಬಹುಷಃ ಪ್ರತಿಯೊಬ್ಬರಿಗೂ ಒಂದೇ ಬಣ್ಣದ ರಕ್ತವನ್ನು ಕೊಟ್ಟಿದ್ದಾರೆ. ರಕ್ತದಾನ ಮಾಡುವುದರಿಂದ ಜೀವಕ್ಕೆ ಯಾವುದೇ ಅಪಾಯವಿಲ್ಲ ಬದಲಾಗಿ ಆರೋಗ್ಯದ ವರ್ಧನೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಗಜಾನನ ಯಕ್ಷಗಾನ ಕಲಾಸಂಘ(ರಿ) ಬಡಾನಿಡಿಯೂರು ತೊಟ್ಟಾಂ ಇದರ ಅಧ್ಯಕ್ಷರಾದ ಶಶಿಧರ್ ಎಂ ಅಮೀನ್ ಮಾತನಾಡಿ, ತೊಟ್ಟಂನಲ್ಲಿ ಧರ್ಮಗುರು ಡೆನಿಸ್ ಡೆಸಾ ಆಗಮಿಸಿದ ಬಳಿಕ ಬಂಧುತ್ವದ ಹೊಸ ಅಲೆ ಹರಿಯಲಾರಂಭಿಸಿದ್ದು ಮುಂದಿನ ದಿನಗಳಲ್ಲಿ ಜನಪಯೋಗಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಲ್ಪೆ ಠಾಣೆಯ ಠಾಣಾಧಿಕಾರಿ ಸುಶ್ಮಾ ಮಾತನಾಡಿ ಎಲ್ಲಾ ಧರ್ಮದವರು ಒಟ್ಟಾಗಿ ಸೇರಿ ರಕ್ತದಾನದಂತಹ ಸಮಾಜಮುಖಿ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿ ಇಂತಹ ಐಕ್ಯತೆಗಾಗಿ ತಮ್ಮ ಸಹಕಾರದ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಆಧ್ಯಕ್ಷರು ಶ್ರೀ ಗಜಾನನ ಯಕ್ಷಗಾನ ಕಲಾಸಂಘ(ರಿ) ಬಡಾನಿಡಿಯೂರು ತೊಟ್ಟಾಮ್, ಡಾ.ವೀಣಾ ಕುಮಾರಿ ಎಂ. ಜಿಲ್ಲಾ ಶಸ್ತ್ರಚಿಕಿತ್ಸಕರು, ಜಿಲ್ಲಾ ಆಸ್ಪತ್ರೆ ಉಡುಪಿ, ರಮೇಶ್ ತಿಂಗಳಾಯ ಆಧ್ಯಕ್ಷರು, ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ, ಶ್ರೀನಿವಾಸ್ ಅಧ್ಯಕ್ಷರು ಜೀವ ಸಂಜೀವಿನಿ ರಕ್ತದಾನ ಬಳಗ ಉಡುಪಿ, ಪ್ರವೀಣ್ ಬಡಾನಿಡಿಯೂರು ಗ್ರಾಮ ಪಂಚಾಯತ್ ಸದಸ್ಯರು, ರಾಮಪ್ಪ ಸಾಲಿಯನ್, ಸಿಎಸ್ ಐ ಎಬನೇಜರ್ ಚರ್ಚ್ ಮಲ್ಪೆ ಇದರ ವಂ|ಎಡ್ವಿನ್ ಜೋಸೇಫ್ ಮತ್ತು ಸ್ಥಳಿಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರಕ್ತದಾನ ಮಾಡಿದ ಎಲ್ಲಾ ದಾನಿಗಳಿಗೆ ಜಿಲ್ಲಾಸ್ಪತ್ರೆ ವತಿಯಿಂದ ಪ್ರಮಾಣ ಪತ್ರಗಳನ್ನು ನೀಡಿ ಅಭಿನಂದಿಸಲಾಯ್ತು ಹಾಗೂ ಇಂತಹ ಸಮಾಜಮುಖಿ ಕಾರ್ಯಕ್ರಮನ್ನು ಆಯೋಜಿಸಿದ ಸರ್ವ ಧರ್ಮ ಸೌಹರ್ದಾ ಸಮಿತಿಗೆ ಜಿಲ್ಲಾಸ್ಪತ್ರೆ ಪರವಾಗಿ ಪ್ರಮಾಣ ಪತ್ರ ಕೊಟ್ಟು ಆಭಿನಂದಿಸಲಾಯ್ತು. ಸರ್ವ ಧರ್ಮ ಸೌಹಾರ್ದ ಸಮಿತಿಯ ಕಾರ್ಯದರ್ಶಿ ಲೆಸ್ಲಿ ಆರೋಜಾರವರು ಸಂಪೂರ್ಣ ಕಾರ್ಯಕ್ರಮದ ನಿರೂಪಣೆ ಮಾಡಿದರು.


Share with

Leave a Reply

Your email address will not be published. Required fields are marked *