ಉಡುಪಿ: ಮನೆ ಸಮೀಪ ನಿಲ್ಲಿಸಿದ್ದ ರಿಕ್ಷಾದ ಬಿಡಿಭಾಗಗಳನ್ನು ಹಾನಿ ಮಾಡುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಉಡುಪಿಯ ಪಾಡಿಗಾರಿನ ಎಸ್ ಟಿ ಕಾಲನಿಯಲ್ಲಿ ನಡೆದಿದೆ.
ಗೋಪಾಲಕೃಷ್ಣ ಸಾಮಗ ಎಂಬುವವರ ಜಾಗದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿರುವ ಬಾದಾಮಿ ಮೂಲದ ವಲಸೆ ಕಾರ್ಮಿಕ ಅಭಿಷೇಕ್ ಆರೋಪಿ. ಈತ ಕಳೆದ ಮೂರು ತಿಂಗಳಿಂದ ಈ ಕಾಲನಿಯಲ್ಲಿ ನಿಲ್ಲಿಸಿದ್ದ ರಿಕ್ಷಾದ ಬಿಡಿಭಾಗಗಳನ್ನು ಹಾನಿಗೊಳಿಸುತ್ತಿದ್ದ.
ಈ ಕೃತ್ಯ ಯಾರು ನಡೆಸುತ್ತಿದ್ದರು ಎಂಬುದೇ ಗೊತ್ತಾಗುತ್ತಿರಲಿಲ್ಲ. ನಿನ್ನೆ ರಾತ್ರಿ ಸ್ಥಳೀಯ ಮನೆಯೊಂದರ ಮಹಡಿ ಮೇಲೆ ಅಡಗಿ ಕುಳಿತಿದ್ದ ರಿಕ್ಷಾ ಚಾಲಕರ ಕಣ್ಣೆದುರೇ ಆತ ಕೈಯಿಂದ ನಂಬರ್ ಪ್ಲೇಟ್ ಗೆ ಹಾನಿ ಮಾಡುತ್ತಿದ್ದಾಗ ಹಿಡಿದು ಪೊಲೀಸರಿಗೆ ಒಪ್ಪಿಸಲಾಯಿತು. ಮತ್ತೊಮ್ಮೆ ಕೃತ್ಯ ನಡೆಸದಂತೆ ಪೊಲೀಸರು ಮುಚ್ಚಳಿಕೆ ಬರೆಸಿ ಎಚ್ಚರಿಕೆ ನೀಡಿ ಕಳಿಸಿಕೊಟ್ಟಿದ್ದಾರೆ.