ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಮಂಗನ ಕಾಯಿಲೆ ಪ್ರಕರಣ ಏರಿಕೆಯಾಗುತ್ತಿದ್ದು ಈವರೆಗೂ 21 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ|ನೀರಜ್ ಸಿದ್ದಾಪುರ ಅವರು ತಾಲೂಕಿನಲ್ಲಿ ಮಂಗನ ಕಾಯಿಲೆ ಕಂಡು ಬರುತ್ತಿದ್ದು ಬಿಸಿಲು ಹೆಚ್ಚಾದಂತೆ ಮಂಗನ ಕಾಯಿಲೆ ಹೆಚ್ಚಾಗುವ ಆತಂಕವಿದೆ. ಸದ್ಯ ಸೋಂಕು ಹರಡುವಿಕೆ ತಡೆಗೆ ರೋಗ ನಿರೋಧಕ ಲಸಿಕೆ ಇಲ್ಲದಿರುವುದಿಂದ ಮುನ್ನೆಚ್ಚರಿಕೆ ಕ್ರಮ ವಹಿಸುವುದು ಮುಖ್ಯವಾಗಿದ್ದು, ಜನರಲ್ಲಿ ಮಂಗನ ಕಾಯಿಲೆ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ.
ಜನರಿಗೆ ಅರಣ್ಯಕ್ಕೆ ಹೋಗುವುದನ್ನು ಕಡಿಮೆ ಮಾಡುವಂತೆ ಹಾಗೂ ಜ್ವರ, ಕೆಮ್ಮು ಲಕ್ಷಣ ಕಂಡು ಬಂದಲ್ಲಿ ಸಂಪರ್ಕಿಸಲು ಸೂಚನೆ ನೀಡಿದ್ದೇವೆ. ಸೋಂಕು ತಗುಲಿರುವ 21 ಜನರ ಪೈಕಿ 8 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. 8 ಜನರ ಪೈಕಿ ಇಬ್ಬರು ಮಂಗಳೂರಿನ ಮಣಿಪಾಲ ಆಸ್ಪತ್ರೆಗೆ, ಉಳಿದ ಆರು ಜನ ಸಿದ್ಧಾಪುರ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದ 13 ಜನ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇನ್ನು 2ನೇ ಬಾರಿಗೆ ಮಂಗನ ಕಾಯಿಲೆಗೆ ತುತ್ತಾದರೆ ಜ್ವರ ಹೆಚ್ಚಾಗಿ ರಕ್ತ ಸ್ರಾವ ಆಗುವ ಸಾಧ್ಯತೆಯಿದೆ. ಆದ್ದರಿಂದ ಜನ ಮುಂಜಾಗ್ರತೆ ವಹಿಸುವುದೊಂದೇ ದಾರಿ. ಈ ಹಿಂದೆ ಬಿಡುಗಡೆ ಮಾಡಿದ್ದ ಲಸಿಕೆ ಹೆಚ್ಚು ಪರಿಣಾಮಕಾರಿಯಾಗಿಲ್ಲ. ಇದರಿಂದಾಗಿ ಆ ಲಸಿಕೆ ನೀಡುವುದನ್ನು ಈಗಾಗಲೇ ನಿಲ್ಲಿಸಿದ್ದೇವೆ. ಹೊಸ ಲಸಿಕೆ ಬರುವವರೆಗೆ ಮುಂಜಾಗ್ರತೆ ವಹಿಸುವುದೊಂದೇ ಪರಿಹಾರ ಎಂದು ಅವರು ತಿಳಿಸಿದ್ದಾರೆ.