ಮಂಗಳೂರು: ಕರ್ನಾಟಕ ಸಿವಿಲ್ ನ್ಯಾಯಾಧೀಶರ 2023ನೇ ಸಾಲಿನ ಪರೀಕ್ಷೆಯಲ್ಲಿ ತುಮಕೂರು ಮೂಲದ ಗೀತಾ ಡಿ. ಅವರು ಉತ್ತೀರ್ಣರಾಗಿದ್ದು, ಸಿವಿಲ್ ನ್ಯಾಯಾಧೀಶೆಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಮೂಲತಃ ತುಮಕೂರಿನವರಾದ ಇವರು ಪುತ್ತೂರು ತಾಲೂಕಿನ ಚಾರ್ವಾಕ ಮೂಲದ ವಕೀಲ ಕಾರ್ತಿಕ್ ಮಾಚಿಲ ಅವರನ್ನು ಮದುವೆಯಾಗಿದ್ದು ಬಳಿಕ ಮಂಗಳೂರಿನಲ್ಲಿ ವಕೀಲ ದಂಪತಿಯಾಗಿ ಸ್ವಂತ ಕಚೇರಿ ಆರಂಭಿಸಿ ಪ್ರಾಕ್ಟಿಸ್ ಮಾಡುತ್ತಿದ್ದರು. 2020ರಲ್ಲಿ ಎಲ್ ಎಲ್ ಬಿ ಪೂರೈಸಿದ್ದ ಗೀತಾ ಅವರು ಸತತ ಮೂರು ವರ್ಷದಿಂದ ಸಿವಿಲ್ ಜಡ್ಜ್ ಪರೀಕ್ಷೆ ಬರೆಯುತ್ತಿದ್ದರು. ಮೂರನೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದು, ಸಿವಿಲ್ ನ್ಯಾಯಾಧೀಶೆಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಮತ್ತು ಮಂಗಳೂರಿನ ಎಸ್ಡಿಎಂ ಕಾನೂನು ಕಾಲೇಜಿನಲ್ಲಿ ಶಿಕ್ಷಣ ಪಡೆದ ಇವರು 2023ರ ಕರ್ನಾಟಕ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಮೂಲಕ ಕರಾವಳಿಗೆ ಕೀರ್ತಿಯನ್ನು ತಂದಿದ್ದಾರೆ.