ಉಡುಪಿ: ಕಾಪು ಲೈಟ್ಹೌಸ್ನಲ್ಲಿ ಪ್ರವಾಸಿ ಸೌಲಭ್ಯಗಳನ್ನು 1.40 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಕೇಂದ್ರ ಸರ್ಕಾರದ ಪೋರ್ಟ್ಸ್ ಶಿಪ್ಪಿಂಗ್ ಅಂಡ್ ವಾಟರ್ ವೇಸ್, ಡೈರೆಕ್ಟರೇಟ್ ಜನರಲ್ ಆಫ್ ಲೈಟ್ ಹೌಸಸ್ ಅಂಡ್ ಲೈಟ್ ಶಿಪ್ಸ್ ಇಲಾಖೆಯ ವತಿಯಿಂದ ಕಾಪು ದೀಪಸ್ತಂಭಗಳನ್ನು ಉಳಿಸಿಕೊಂಡು ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಇದರ ಉದ್ಘಾಟನೆಯನ್ನು ತಮಿಳುನಾಡಿನ ಟ್ಯುಟಿಕೋರಿನ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವರ್ಚುವಲ್ ಮೂಲಕ ನೆರವೇರಿಸಿದರು.
ಇದರ ನೇರಪ್ರಸಾರವನ್ನು ಫೆ.28ರಂದು ಉಡುಪಿ ಜಿಲ್ಲೆಯ ಕಾಪು ದೀಪಸ್ತಂಭದ ಆವರಣದಲ್ಲಿ ಆಯೋಜಿಸಲಾಗಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಭಾಗವಹಿಸಿ ಮಾತನಾಡಿದರು.
ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಮಾಡಿದ ಕಾರ್ಯಕ್ರಮಗಳನ್ನು ಮೋದಿಯವರೇ ಉದ್ಘಾಟಿಸುತ್ತಿರುವುದು ಅವರ ಹೆಗ್ಗಳಿಕೆ. ಹಿಂದಿನ ಸರ್ಕಾರಗಳಲ್ಲಿ ಈ ರೀತಿ ಆಗುತ್ತಿರಲಿಲ್ಲ. ಭಾರತದ ಅಭಿವೃದ್ಧಿಯನ್ನು ಈ ಎತ್ತರದ ವೇಗಕ್ಕೆ ತೆಗೆದುಕೊಂಡು ಹೋದ ಕೀರ್ತಿ ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ ಎಂದರು.
ದೇಶದಾದ್ಯಂತ 75 ಲೈಟ್ ಹೌಸ್ಗನ್ನು ಪುನರ್ಜೀವನ ಮಾಡಿದ್ದಾರೆ. ಈ ಮೂಲಕ ಪ್ರವಾಸೋದ್ಯಮಕ್ಕೆ ಅವಕಾಶವಾಗಲಿದೆ. ಕರಾವಳಿ ಭಾಗದ ಅಭಿವೃದ್ಧಿ ಕಾರ್ಯಗಳ ಕುರಿತು ದೇಶದ ಪಶ್ಚಿಮ ಮತ್ತು ಪೂರ್ವ ಕರಾವಳಿಯ ಎಲ್ಲಾ ರಾಜ್ಯಗಳ ಸಂಸದರು ಮತ್ತು ಶಾಸಕರ ಸಭೆಯನ್ನು ನಡೆಸಿ, ಈ ಸಭೆಯಲ್ಲಿ ನಮ್ಮ ಬಂದರುಗಳ ಅಭಿವೃದ್ಧಿಯ ಸಲುವಾಗಿ ಬೇಡಿಕೆ ಇಟ್ಟಿದ್ದೆವು. ನಮ್ಮ ದೀಪಸ್ತಂಭಗಳ ಅಭಿವೃದ್ಧಿ, ಬ್ಲೂ ಫ್ಲಾಗ್ ಬೀಚ್ ಗೆ ಬೇಡಿಕೆ ಇಟ್ಟಿದ್ದೆವು. ಇದರಿಂದ ವಿದೇಶಿಯರು ಬಂದು ಪ್ರವಾಸೋದ್ಯಮಕ್ಕೆ ಅನುಕೂಲವಾಗುತ್ತೆ. ವಿದೇಶಿಯರು ಬ್ಲೂ ಫ್ಲಾಗ್ ಬೀಚ್ ಗಳನ್ನು ಹುಡುಕಿಕೊಂಡು ಬರುತ್ತಾರೆ ಎಂದರು.
ಮಲ್ಪೆ ಬಂದರು ಅಭಿವೃದ್ಧಿ ಮತ್ತು ಹೂಳೆತ್ತಲು ಹಣ ನೀಡಿದ್ದೇವೆ. ಹೆಜಮಾಡಿಗೆ 180 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸದಾಗಿ ಬಂದರು ನಿರ್ಮಾಣಕ್ಕೆ ಅನುದಾನ ನೀಡಿದ್ದೇವೆ. ಹಂಗಾರು ಕಟ್ಟೆಯಲ್ಲಿ ಕಳೆದ ಬಾರಿ ಡ್ರೆಜ್ಜಿಂಗ್ ಆಗಿದ್ದು ಬಂದರು ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದೇವೆ. ಈ ಅಭಿವೃದ್ಧಿಗೆ 70 ಕೋಟಿ ಹಣ ಇರಿಸಿದ್ದೇವೆ ಎಂದರು.
ಕೇಂದ್ರದಿಂದ ನಾವು ಎಷ್ಟಾದರೂ ಹಣ ತರಬಹುದು. ಆದರೆ ಕಾರ್ಯ ಮಾಡಬೇಕಾಗಿರುವುದು ರಾಜ್ಯದ ಅಧಿಕಾರಿಗಳು. ಕಾಮಗಾರಿಗಳಿಗೆ ಅಗತ್ಯ ಭೂಮಿಯನ್ನು ಒದಗಿಸುವುದು ಸಹ ಇವರ ಮೇಲಿದೆ. ಎಲ್ಲಾ ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಂಡಿದ್ದೇವೆ. ರೈಲ್ವೆ ಲೈನ್ ಗಳನ್ನು ವಿದ್ಯುತೀಕರಣ ಮಾಡಿದ್ದೇವೆ. ರಾಷ್ಟ್ರಾದ್ಯಂತ ರೈಲು ಸಂಚಾರವನ್ನು ವಿದ್ಯುಧೀಕರ ಗೊಳಿಸಲು ಪ್ರಧಾನಿ ಮೋದಿ ಅವರು ವಿಶೇಷ ಮುತುವರ್ಜಿ ವಹಿಸಿದ್ದಾರೆ ಎಂದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಕಾಪು ಲೈಟ್ಹೌಸ್ 1908 ರಲ್ಲಿ ಪ್ರಾರಂಭಿಸಲಾಗಿತ್ತು. ಇದನ್ನು ಉಳಿಸಬೇಕು ಬೆಳೆಸಬೇಕು ಎಂಬ ಆಶಯದೊಂದಿಗೆ ಕಾಪು ಲೈಟ್ ಹೌಸ್ ಅನ್ನು ಪ್ರವಾಸೋದ್ಯಮ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲಾಗಿದೆ ಎಂದ ಅವರು, ನಮ್ಮ ದೇಶವು ಅಂತರಾಷ್ಟ್ರೀಯ ಮಟ್ಟದಲ್ಲಿ ಘನತೆ ಹಾಗೂ ಗೌರವವನ್ನು ನಮ್ಮ ಪ್ರಧಾನಿ ಹೆಚ್ಚಿಸದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಎಡಿಸಿ ಮಮತಾ ದೇವಿ, ಕೇಂದ್ರ ಬಂದರು, ಹಡಗು ಮತ್ತು ಜಲ ಸಾರಿಗೆ ಇಲಾಖೆಯ ಉಪ ನಿರ್ದೇಶಕ ಪ್ರಸಾದ್ ನಿಮಾರೆ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.