ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡುವುದಕ್ಕೆ ಬಿಜೆಪಿ ಕಾರ್ಯಕರ್ತರಿಂದಲೇ ಭಾರಿ ವಿರೋಧ ವ್ಯಕ್ತವಾಗಿದೆ. ಮಾ.2ರಂದು ದೊಡ್ಡ ಸಂಖ್ಯೆಯಲ್ಲಿ ಮೀನುಗಾರ ಸಮುದಾಯದ ಕಾರ್ಯಕರ್ತರು ಶೋಭಾ ವಿರುದ್ಧ ಬಹಿರಂಗವಾಗಿಯೇ ಬೃಹತ್ ಶಕ್ತಿ ಪ್ರದರ್ಶನ ನಡೆಸಿದರು.
ಮಲ್ಪೆಯಿಂದ ಉಡುಪಿಯ ಬಿಜೆಪಿ ಕಚೇರಿ ತನಕ ಬೈಕ್ ರ‍್ಯಾಲಿ ಮೂಲಕ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಬಿಜೆಪಿ ಕಚೇರಿ ಮುಂದೆ ಜಮಾಯಿಸಿದರು. ಬಳಿಕ ಜಿಲ್ಲಾಧ್ಯಕ್ಷ ಕಿಶೋರ್ ಕುಂದಾಪುರ ಅವರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ಶೋಭಾ ಕರಂದ್ಲಾಜೆ ಅವರಿಗೆ ಇನ್ನೊಂದು ಬಾರಿ ಅವಕಾಶ ನೀಡಬಾರದು. ಈಗಾಗಲೇ ಎರಡು ಅವಧಿಗೆ ಈ ಕ್ಷೇತ್ರವನ್ನು ಅವರು ಪ್ರತಿನಿಧಿಸಿದ್ದಾರೆ.
ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಈ ಬಾರಿ ಕೂಡ ಮತ್ತೊಮ್ಮೆ ತಮಗೇ ಟಿಕೆಟ್ ಎಂದು ಓಡಾಡಿಕೊಂಡಿದ್ದಾರೆ. ಮೋದಿ ಹೆಸರಿನಲ್ಲಿ ಅವರು ಮತ್ತೊಮ್ಮೆ ಗೆಲ್ಲುವುದು ಬೇಡ. ಅವರ ಬದಲು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಅವರ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
ಕೆಲವು ದಿನಗಳ ಹಿಂದೆ ಮೀನುಗಾರ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಹರಿಹಾಯ್ದಿದ್ದರು. ಮಾತ್ರವಲ್ಲ, ಮೀನುಗಾರ ಮುಖಂಡ ಪ್ರಮೋದ್ ಮಧ್ವರಾಜ್ ಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ್ದರು. ಕೆಲ ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಗೋ ಬ್ಯಾಕ್ ಶೋಭಾ ಎಂಬ ಅಭಿಯಾನವನ್ನು ಕೂಡ ಬಿಜೆಪಿ ಕಾರ್ಯಕರ್ತರೇ ನಡೆಸಿದ್ದರು.