ಉಡುಪಿ: ವಸತಿ ಹಂಚಿಕೆಯಾದ ಫಲಾನುಭವಿಗಳು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ವಸತಿ ಸಮುಚ್ಛಯಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಹಂತಹಂತವಾಗಿ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಹೇಳಿದರು.
ಉಡುಪಿ ನಗರಸಭೆ ವ್ಯಾಪ್ತಿಯ ಹೆರ್ಗ ಸರಳಬೆಟ್ಟು ಪ್ರದೇಶದಲ್ಲಿರುವ 240 ಸರ್ಕಾರಿ ವಸತಿ ಸಮುಚ್ಛಯಗಳ ಕಟ್ಟಡವನ್ನು ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ನವರು ಮಾ.2ರಂದು ವರ್ಚುವಲ್ ಮೂಲಕ ಲೋಕರ್ಪಣೆ ಮಾಡಿದರು. ವಸತಿ ಸಮುಚ್ಛಯದ ಅಂಗಳದಲ್ಲಿ ಏರ್ಪಡಿಸಲಾಗಿದ್ದ ಉದ್ಘಾಟನೆಯ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಾಗೂ ನಗರಸಭೆಯ ಅನುದಾನದ ಅಡಿಯಲ್ಲಿ 240 ಮನೆಗಳನ್ನು ಹೆರ್ಗಾ ವ್ಯಾಪ್ತಿಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಸುಂದರವಾಗಿ ನಿಮಾಣ ಮಾಡಿದ್ದಾರೆ. ಈಗಾಗಲೇ ಪೂರ್ತಿ ಪ್ರಮಾಣದಲ್ಲಿ ಮನೆಯ ಹಂಚಿಕೆಯಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ವಿಜಯಲಕ್ಷ್ಮೀ, ಅಮೃತ ಕೃಷ್ಣಮೂರ್ತಿ, ಪೌರಾಯುಕ್ತ ರಾಯಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.