ಉಡುಪಿ: ಚುನಾವಣಾ ಆಯೋಗ ಸೂಚಿಸಿರುವ ನಿಯಮಾನುಸಾರ ಚುನಾವಣೆಗೆ ಸಂಬಂಧಿಸಿದ ಯಾವುದೇ ರೀತಿಯ ಕರಪತ್ರ ಹಾಗೂ ಜಾಹೀರಾತು ಮೂಲಕ ಚುನಾವಣೆ ಪ್ರಚಾರ ಪಡಿಸುವ ಮುನ್ನ ಎಂ.ಸಿ.ಎಂ.ಸಿ ಪ್ರಾಧಿಕಾರದ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದರು.
ಅವರು ಮಾ.2ರಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ತಡೆಯುವುದಕ್ಕಾಗಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸ್ಥಳೀಯ ಕೇಬಲ್ ಆಪರೇರ‍್ಸ್ ಮತ್ತು ನೆಟ್‌ವರ್ಕ್ ಸರ್ವೀಸ್ ಪ್ರೋವೈರ‍್ಸ್ ಗಳಿಗೆ ಸೂಕ್ತ ನಿರ್ದೇಶನ ನೀಡಲು ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಯು ಕೆಲವೇ ದಿನಗಳಲ್ಲಿ ಘೋಷಣೆಯಾಗಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಭಾಗಿದರರಾಗಿರುವ ಪ್ರತಿಯೊಬ್ಬರೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗದ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.
ಪ್ರಿಂಟಿಂಗ್ ಪ್ರೆಸ್ ಮಾಲೀಕರು ಕರ ಪತ್ರವನ್ನು ಮುದ್ರಿಸುವ ಮುನ್ನ ಕರಪತ್ರದಲ್ಲಿರುವ ಅಂಶಗಳ ವಿವರಗಳನ್ನು ಒಳಗೊಂಡ ಕರಡು ಕರಪತ್ರವನ್ನು ಮುದ್ರಿಸುವ ಮೂರು ದಿನ ಪೂರ್ವದಲ್ಲಿಯೇ ಎಂ.ಸಿ.ಎ..ಸಿ ಗೆ ಸಲ್ಲಿಸಿ, ಅನುಮತಿ ಪಡೆಯಬೇಕು. ಮುದ್ರಣದ ಕರಪತ್ರದಲ್ಲಿ ಮುದ್ರಕರ ಹೆಸರು, ಮುದ್ರಣದ ಸಂಖ್ಯೆಗಳನ್ನು ತಪ್ಪದೇ ನಮೂದಿಸಬೇಕು. ಮುದ್ರಣಕ್ಕೆ ತಗುಲುವ ವೆಚ್ಚವನ್ನು ಸಹ ನೀಡಬೇಕು ಎಂದರು.
ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸುವ ಮುನ್ನ ಜಾಹೀರಾತು ವಿವರಗಳನ್ನು ಎಂ.ಸಿ.ಎಂ.ಸಿ ಸಮಿತಿಯ ಮುಂದೆ ನಿಗಧಿತ ನಮೂನೆಗಳಲ್ಲಿ ನೀಡಿ, ಪೂರ್ವಾನುಮತಿ ಪಡೆದು ಪ್ರಚಾರಪಡಿಸಬೇಕು. ಸಮಾಜದಲ್ಲಿ ಶಾಂತಿ ಕದಡುವುದು, ಇನ್ನೊಬ್ಬರನ್ನು ಅಪಮಾನಿಸುವುದು, ಯಾವುದೇ ಧರ್ಮವನ್ನು ಹೀಯಾಳಿಸುವುದು ಸೇರಿದಂತೆ ಮತ್ತಿತರ ಉಲ್ಲಂಘಿಸದಂತಿರಬೇಕು ಎಂದರು.
ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಕರಪತ್ರಗಳನ್ನು ಮುದ್ರಿಸುವುದು, ಜಾಹೀರಾತುಗಳನ್ನು ಪ್ರಚಾರ ಪಡಿಸುವುದು ಮಾಡಿದ್ದಲ್ಲಿ ಅಂತಹವರ ಮೇಲೆ ಆರ್.ಪಿ ಕಾಯ್ದೆಯಡಿಯಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್.ಕೆ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಕೇಬಲ್ ನೆಟ್‌ವರ್ಕ್ನ ವರದಿಗಾರರು, ಪ್ರಿಂಟಿಂಗ್ ಪ್ರೆಸ್ ಮಾಲೀಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.