ಉಡುಪಿ: ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸಲು ಪ್ರತಿಯೊಬ್ಬರಿಗೂ ಅವಕಾಶವಿದೆ. ಆದರೆ ಪ್ರತಿಭಟನೆಯ ಹೆಸರಿನಲ್ಲಿ ಪ್ರಚೋದನೆಗೆ ಅವಕಾಶ ನೀಡುವುದು ತಪ್ಪು. ಹಿರಿಯ ಸಾಮಾಜಿಕ ಕಾರ್ಯಕರ್ತರಾದ ಎಂ.ಜಿ ಹೆಗ್ಡೆ ಅವರ ಹೇಳಿಕೆಯನ್ನು ಪ್ರತಿಭಟಿಸುವ ಭರದಲ್ಲಿ ಅವರ ಭಾವಚಿತ್ರಕ್ಕೆ ಉಗುಳುವಂತಹ ಸಣ್ಣತನ ಒರ್ವ ಶಾಸಕರಾಗಿ ತೋರಿರುವುದು ನಿಜಕ್ಕೂ ಹಸ್ಯಾಸ್ಪದವಾದುದು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಟೀಕಿಸಿದ್ದಾರೆ.
ಶಾಸಕ ಯಶ್‌ಪಾಲ್ ಸುವರ್ಣ ಅವರು ಮಕ್ಕಳಾಟಿಕೆ ಬಿಟ್ಟು ಉಡುಪಿ ಕ್ಷೇತ್ರದ ಅಭಿವೃದ್ಧಿ ಮಾಡಲು ಕಡೆಗೆ ಗಮನ ಹರಿಸಲಿ. ಶಾಸಕರು ತನ್ನ ಕ್ಷೇತ್ರದ ಪ್ರತಿಯೊಂದು ಧರ್ಮ, ಜಾತಿಯ ಜನರನ್ನು ಒಂದಾಗಿ ಕೊಂಡೊಯ್ಯುವ ಜವಾಬ್ದಾರಿಯನ್ನು ಹೊಂದಿದ್ದು, ಎಂದಿಗೂ ಕೂಡ ಅವರ ವರ್ತನೆ ಬೇಲಿಯೇ ಎದ್ದು ಹೊಲ ಮೇಯುವ ರೀತಿ ಆಗಬಾರದು. ನಾಯಕನಾದವನು ಸಂಸ್ಕಾರಯುತ ಸಮಾಜ ನಿರ್ಮಾಣ ಮಾಡಬೇಕು. ಅದನ್ನು ಬಿಟ್ಟು ಪ್ರಚೋದನೆಗೆ ಅವಕಾಶ ನೀಡುವುದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾನೊಬ್ಬ ಜವಾಬ್ದಾರಿಯುತ ಶಾಸಕ ಎನ್ನುವುದನ್ನು ಮೊದಲು ಅರಿತು ಮುನ್ನಡೆಯುವುದು ಉತ್ತಮ. ಕೀಳು ಮಟ್ಟದ ವರ್ತನೆ ತೋರಲು ಹೋಗುವುದು ಸಮಾಜಕ್ಕೆ ಅಪಾಯಕಾರಿ ಎಂದು ಕಿಡಿಕಾರಿದ್ದಾರೆ.