ಉಡುಪಿ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್, ಮಂಗಳೂರು ಇದರ ಉಡುಪಿ ಘಟಕದ ಉದ್ಘಾಟನೆಯು ಇದೇ ಮಾ.10ರಂದು ಸಂಜೆ 6ಗಂಟೆಗೆ ಉಡುಪಿ ಅಂಬಾಗಿಲು ಅಮೃತ ಗಾರ್ಡನ್‌ನಲ್ಲಿ ಶ್ರೀ ಪಾವಂಜೆ ಮೇಳದ ‘ಅಯೋಧ್ಯಾ ದೀಪ’ ಯಕ್ಷಗಾನ ಪ್ರದರ್ಶನದೊಂದಿಗೆ ನೆರವೇರಲಿದೆ ಎಂದು ಪಟ್ಲ ಟ್ರಸ್ಟ್ ನ ಉಡುಪಿ ಘಟಕದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.
ಉಡುಪಿಯಲ್ಲಿ ಮಾ.7ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣಿಪಾಲ ಮಾಹೆಯ ಸಹಕುಲಪತಿ ಡಾ. ಎಚ್.ಎಸ್.ಬಲ್ಲಾಳ್ ಅವರು ಉಡುಪಿ ಘಟಕವನ್ನು ಉದ್ಘಾಟಿಸಲಿದ್ದಾರೆ. ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.
ಯಕ್ಷಗಾನಕೇಂದ್ರದ ಸಲಹಾ ಸಮಿತಿಯ ಅಧ್ಯಕ್ಷ ಪಿ.ಕಿಶನ್ ಹೆಗ್ಡೆ, ತೆಂಕನಿಡಿಯೂರು ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ಸುರೇಶ್ ರೈ, ಪಟ್ಲ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸುದೇಶ್ ಕುಮಾರ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಟ್ರಸ್ಟ್‌ನ ಕೇಂದ್ರೀಯ ಸಮಿತಿ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಮೇರಿಕ, ಗಲ್ಫ್ ರಾಷ್ಟ್ರಗಳು, ದೆಹಲಿ, ಗುಜರಾತ್, ಮಹಾರಾಷ್ಟ್ರ, ಚೆನ್ನೈ, ಗೋವಾ, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 39 ಘಟಕಗಳನ್ನು ಟ್ರಸ್ಟ್ ಹೊಂದಿದ್ದು, ಇದೀಗ ಉಡುಪಿಯಲ್ಲಿ 40ನೇ ಘಟಕ ಉದ್ಘಾಟನೆಯಾಗಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಡಾ.ಹರೀಶ್ ಜೋಷಿ ವಿಟ್ಲ, ಭುವನಪ್ರಸಾದ್ ಹೆಗ್ಡೆ ಮಣಿಪಾಲ, ರತನ್‌ರಾಜ್ ರೈ ಮಣಿಪಾಲ, ಸುಧಾಕರ ಆಚಾರ್ಯ ಉಪಸ್ಥಿತರಿದ್ದರು.