ಉಡುಪಿ: ರಿಪೇರಿಗೆ ನೀಡಿದ್ದ ಬಸ್ ರಿವರ್ಸ್ ತೆಗೆಯುತ್ತಿದ್ದ ಸಂದರ್ಭದಲ್ಲಿ ಬಸ್ ನ ಚಕ್ರದಡಿಗೆ ಸಿಲುಕಿ ಬಸ್ ಮಾಲೀಕನೋರ್ವ ಮೃತಪಟ್ಟ ದಾರುಣ ಘಟನೆ ಪರ್ಕಳ 80 ಬಡಗಬೆಟ್ಟು ಎಂಬಲ್ಲಿ ಮಾ.13ರಂದು ರಾತ್ರಿ ನಡೆದಿದೆ.
ಮೃತರನ್ನು ಉಡುಪಿ ಮಾಂಡವಿ ಬಸ್‌ನ ಮಾಲೀಕ ದಯಾನಂದ ಶೆಟ್ಟಿ (65) ಎಂದು ಗುರುತಿಸಲಾಗಿದೆ. ಇವರು ತಮ್ಮ ಬಸ್‌ನ್ನು ರಿಪೇರಿಗಾಗಿ 80 ಬಡಗಬೆಟ್ಟು ಬಳಿಯ ಗ್ಯಾರೇಜ್ ವೊಂದಕ್ಕೆ ನೀಡಿದ್ದರು. ರಿಪೇರಿಗೆ ನೀಡಿದ್ದ ಬಸ್ ಅನ್ನು ತೆಗೆದುಕೊಂಡು ಬರುವ ಸಲುವಾಗಿ ಮಾ.13ರಂದು ಗ್ಯಾರೇಜ್ ಗೆ ಹೋಗಿದ್ದರು. ಆಗ ಮೆಕಾನಿಕ್ ಬಸ್ ಸರಿಯಾಗಿದೆಯೆಂದು ನೋಡಲು ಬಸ್ ಚಲಾಯಿಸಿದ್ದಾರೆ.
ಈ ವೇಳೆ ದಯಾನಂದ ಅವರ ಮೇಲೆ ಬಸ್ ಹರಿದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.