ಉಡುಪಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಪ್ರಸಾದ್ ನೇತ್ರಾಲಯ, ಲಯನ್ಸ್ ಕ್ಲಬ್ ಮಿಡ್ ಟೌನ್ ಉಡುಪಿ ಇದರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಎ.ಪಿ.ಜೆ. ಅಬ್ದುಲ್ ಕಲಂ ಅಡಿಟೋರಿಯಂನಲ್ಲಿ ತ್ರಿಶಾ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿಗಳಿಗೆ ನೇತ್ರದಾನ ಜಾಗೃತಿ ಮತ್ತು ನೇತ್ರ ತಪಾಸಣೆ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ಪಂಚೇಂದ್ರಿಯಗಳಲ್ಲಿ ಕಣ್ಣು ಪ್ರಮುಖವಾದ ಅಂಗ. ದೃಷ್ಟಿ ಇಲ್ಲದಿದ್ದರೆ ಜಗತ್ತೇ ಕತ್ತಲು. ಪ್ರಪಂಚದಾದ್ಯಂತ ಅನೇಕ ಜನರು ವಿವಿಧ ರೀತಿಯ ದೃಷ್ಟಿ ದೋಷಗಳಿಂದ ಬಳಲುತ್ತಿದ್ದು ಸಂಕಷ್ಟಮಯ ಜೀವನವನ್ನು ನಡೆಸುತ್ತಿದ್ದಾರೆ. ಇಂತಹವರ ಬದುಕಿನಲ್ಲಿ ಭರವಸೆ ತುಂಬಲು ಯುವ ಜನತೆ ನೇತ್ರದಾನ ಮಾಡುವ ಸತ್ಕಾರ್ಯದಲ್ಲಿ ತಮ್ಮನ್ನು ತೊಡಗಿಸಬೇಕು ಎಂದರು.
ನಮ್ಮ ದೇಶದಲ್ಲಿ ಮೃತ ವ್ಯಕ್ತಿಗಳ ಪಾರ್ಥಿವ ಶರೀರವನ್ನು ಸುಟ್ಟುಬಿಡುತ್ತಾರೆ ಅಥವಾ ಹೂಳಲಾಗುತ್ತಿದೆ. ನೇತ್ರದಾನದ ಕೊರತೆಗೆ ಇದೂ ಒಂದು ಪ್ರಮುಖ ಕಾರಣವಾಗಿದೆ. ಅಲ್ಲದೆ ನೇತ್ರದಾನ ಅತ್ಯಂತ ಶ್ರೇಷ್ಠ ಮತ್ತು ಮಹತ್ವದ್ದಾಗಿದೆ. ನೇತ್ರದಾನ ಮಾಡುವುದರಿಂದ ಕತ್ತಲಿನಲ್ಲಿರುವವರಿಗೆ ಬೆಳಕಿನ ಭಾಗ್ಯ ಕೊಟ್ಟ ಪುಣ್ಯ ಬರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಸಂಸ್ಥಾಪಕ ಗೋಪಾಲಕೃಷ್ಣ ಭಟ್ ವಹಿಸಿ, ಕಣ್ಣಿನ ಮಹತ್ವದ ಬಗ್ಗೆ ವಿವರಿಸಿ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಹೇಳಿದರು. ಪ್ರಸಾದ್ ನೇತ್ರಾಲಯದ ತಜ್ಞೆ ಡಾ. ಅನುಷಾರವರು ವಿದ್ಯಾರ್ಥಿಗಳಿಗೆ ನೇತ್ರದಾನದ ಮಹತ್ವ ಮತ್ತು ಪ್ರಯೋಜನದ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಉಡುಪಿ ಮಿಡ್ ಟೌನ್‌ನ ಅಧ್ಯಕ್ಷ ಲಯನ್ ಅನಂತ ಶೆಟ್ಟಿ ಕೆ, ಪ್ರೊ.ನಾರಾಯಣ ರಾವ್, ಯುವ ರೆಡ್ ಕ್ರಾಸ್ ಕಾರ್ಯಕ್ರಮ ಅಧಿಕಾರಿ ಪ್ರೊ.ಚೇತನಾ ಸನಿಲ್, ಪ್ರೊ.ಅಶ್ವಿನಿ, ಡಾ.ಅನುಷಾ, ಯುವ ರೆಡ್ ಕ್ರಾಸ್ ಮುಖಂಡರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯುವ ರೆಡ್ ಕ್ರಾಸ್ ಘಟಕದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೇತ್ರ ತಪಾಸಣೆಯನ್ನು ನಡೆಸಲಾಯಿತು.