ಉಡುಪಿ: ಮಾಜಿ ಶಾಸಕರಿಂದ ಅಕ್ರಮ ರೆಸಾರ್ಟ್ ನಿರ್ಮಾಣಕ್ಕೆ ಯತ್ನ: ಬಡಾನಿಡಿಯೂರು ಗ್ರಾಮಸ್ಥರಿಂದ ತೀವ್ರ ವಿರೋಧ

Share with

ಉಡುಪಿ: ಬಡಾನಿಡಿಯೂರು ಕಡಲ ತೀರದಲ್ಲಿ ಮಾಜಿ ಶಾಸಕ ರಘುಪತಿ ಭಟ್ ಅಕ್ರಮವಾಗಿ ರೆಸಾರ್ಟ್ ನಿರ್ಮಾಣಕ್ಕೆ ಹುನ್ನಾರ ನಡೆಸುತ್ತಿದ್ದು, ಇದಕ್ಕೆ ಅವಕಾಶ ನೀಡಿದರೆ ತೀವ್ರ ಹೋರಾಟ ನಡೆಸಲಾಗುವುದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಬಡಾನಿಡಿಯೂರು ಕರಾವಳಿ ಯುವಕ ಮಂಡಲ ಮತ್ತು ಕರಾವಳಿ ಮಹಿಳಾ ಮಂಡಲದ ನೇತೃತ್ವದಲ್ಲಿ ಬಡಾನಿಡಿಯೂರು ಸಮುದ್ರ ತೀರದಲ್ಲಿ ನಡೆದ ಜನಜಾಗೃತಿ ಸಭೆಯಲ್ಲಿ ಗ್ರಾಮಸ್ಥರು ಮಾಜಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಕರಾವಳಿ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶಿವಾನಂದ ಸುವರ್ಣ, ಬಡಾನಿಡಿಯೂರು ಗ್ರಾಮದ ಸರ್ವೆ ನಂಬರ್ 118ರಲ್ಲಿ ಮಾಜಿ ಶಾಸಕ ಕೆ.ರಘುಪತಿ ಭಟ್ ಮತ್ತು ಅವರ ಶ್ರೀನಿವಾಸ ಅಸೋಸಿಯೇಟ್ ಎಂಬ ಸಂಸ್ಥೆ ಅಕ್ರಮವಾಗಿ ರೆಸಾರ್ಟ್ ನಿರ್ಮಿಸಲು ಹುನ್ನಾರ ನಡೆಸುತ್ತಿದೆ. ಇಲ್ಲಿರುವ ಸರಕಾರಿ ಜಾಗದಲ್ಲಿ ಕರಾವಳಿ ಯುವಕ ಮಂಡಲ ಕ್ರೀಡಾಂಗಣ ಹಾಗೂ ಉದ್ಯಾನವನ ನಿರ್ಮಿಸಲು ಮಣ್ಣು ಹಾಕಿದಾಗ ಮಾಜಿ ಶಾಸಕರು ಕರೆ ಮಾಡಿ ಮಣ್ಣು ತೆರವುಗೊಳಿಸುವಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.
ಈ ಪ್ರದೇಶದಲ್ಲಿ ತಲಾತಲಾಂತರದಿಂದ ಸಾಂಪ್ರಾದಾಯಿಕ ಮೀನುಗಾರಿಕೆ ನಡೆಸಲಾಗುತ್ತಿದೆ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಇದು ಸಂಪೂರ್ಣ ವಸತಿ ಪ್ರದೇಶವಾಗಿದೆ. ಇಲ್ಲಿ ಸುಮಾರು 50 ಕೋಟಿ ರೂ.ಗೂ ಅಧಿಕ ಬಂಡವಾಳ ಹಾಕಿ ಈ ದೊಡ್ಡ ಯೋಜನೆ ಮಾಡುವ ಮೂಲಕ ಪಾಶ್ಚಿಮಾತ್ಯ ಸಂಸ್ಕೃತಿ ಹೇರುವ ಪ್ರಯತ್ನ ನಡೆಸಲಾಗುತ್ತಿದೆ. ರೆಸಾರ್ಟ್‌ನಲ್ಲಿ ಪಬ್, ಬಾರ್‌ಗಳು ಕೂಡ ನಿರ್ಮಿಸಬೇಕಾಗುತ್ತದೆ. ಈ ರೀತಿಯ ಸಂಸ್ಕೃತಿಗೆ ನಾವು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.
ಸ್ಥಳೀಯ ಮೀನುಗಾರ ಸುರೇಶ್ ಬಂಗೇರ ಹಾಗೂ ತೊಟ್ಟಂ ಸರ್ವಧರ್ಮ ಸಮನ್ವಯ ಸಮಿತಿ ಅಧ್ಯಕ್ಷ ರಮೇಶ್ ತಿಂಗಳಾಯ ಮಾತನಾಡಿ, ರೆಸಾರ್ಟ್ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ರು.
ಸಭೆಯಲ್ಲಿ ಕರಾವಳಿ ಯುವಕ ಮಂಡಲದ ಅಧ್ಯಕ್ಷ ನಾಗೇಂದ್ರ ಮೆಂಡನ್, ಕರಾವಳಿ ಮಹಿಳಾ ಮಂಡಲದ ಅಧ್ಯಕ್ಷೆ ನಳಿನಿ ಸದಾಶಿವ, ಗುರಿಕಾರ ರಾಮಪ್ಪ ಸಾಲ್ಯಾನ್, ಮುಖಂಡರಾದ ದಯಾನಂದ ಸುವರ್ಣ, ಗಂಗಾಧರ ಮೈಂದನ್, ಗೋಪಾಲ ಕರ್ಕೇರ, ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಪ್ರಸಾದ್‌ರಾಜ್ ಕಾಂಚನ್, ಕೃಷ್ಣಮೂರ್ತಿ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *