ಉಪ್ಪಳ: ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ಲೋಕಕ್ಷೇಮಕ್ಕಾಗಿ ಅತ್ಯಪೂರ್ವವಾದ ‘ನವಗ್ರಹ ಪ್ರತಿಷ್ಠೆ’ ಹಾಗೂ ‘ಅಷ್ಟೋತ್ತರ ಸಹಸ್ರ ನವಗ್ರಹ ಯಾಗ’ಗಳು ಸಹಸ್ರಾರು ಭಕ್ತಾದಿಗಳ ಪಾಲ್ಗೊಳ್ಳುವಿಕೆಯಿಂದ ವಿಜೃಂಭಣೆಯಿದ ಮಾ.24ರಂದು ನಡೆಯಿತು.
ಉಡುಪಿಯ ಅದಮಾರು ಮಠದ ಪರಮ ಪೂಜ್ಯ ಶ್ರೀ ಶ್ರೀ ಈಶ ಪ್ರಿಯ ತೀರ್ಥ ಶ್ರೀಪಾದಂಗಳವರು ತಮ್ಮ ಆಶೀರ್ವಚನದಲ್ಲಿ “ಇಡೀ ದೇಶಕ್ಕೆ ಯಾಗದ ಮೂಲಕ ಸಂಪತ್ತು ತನ್ಮೂಲಕ ಸದ್ಭಾವನೆ ದೊರೆಯುತ್ತದೆ, ನಾವೆಲ್ಲರೂ ಕೂಡ ದೇಶದ ಏಳಿಗೆಯನ್ನು ಕೊಂಡೆವೂರು ಶ್ರೀಗಳಂತಹ ಯತಿಶ್ರೇಷ್ಠರ ಮಾರ್ಗದರ್ಶನದಲ್ಲಿ ಬಯಸೋಣ” ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕಟೀಲು ಶ್ರೀ ಕ್ಷೇತ್ರದ ಅನುವಂಶಿಕ ಪ್ರಧಾನ ಆಚಾರ್ಯತ್ರಯರಲ್ಲಿ ಒಬ್ಬರಾದ ಬ್ರಹ್ಮಶ್ರೀ ಅನಂತಪದ್ಮನಾಭ ಆಸ್ರಣ್ಣರು “ಯಜ್ಞ ಕಾಮಧೇನು ಇದರಿಂದಾಗಿ ವಾತಾವರಣದ ಓಝೋನ್ ಪದರ ಗಟ್ಟಿಯಾಗುತ್ತದೆ, ನಾವು ಅಲಭ್ಯ ಲಾಭವನ್ನು ಪಡೆಯುತ್ತೇವೆ, ಇನ್ನೊಬ್ಬರ ಏಳಿಗೆಯನ್ನೇ ಬಯಸುವ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಈ ಎಲ್ಲಾ ಚಟುವಟಿಕೆಗಳಿಗೆ ಕಾರಣಕರ್ತೃರಾಗಿದ್ದಾರೆ ಎಂದು ಹೇಳುತ್ತ ನಮಗೆಲ್ಲರಿಗೂ ಕೂಡ ನವಗ್ರಹರ ಆರಾಧನೆಯ ಮೂಲಕವಾಗಿ ಸನ್ಮಂಗಳವಾಗಲಿ” ಎಂದರು.
ಎಡನೀರು ಮಠದ ಪರಮ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು, ಶ್ರೀ ಕ್ಷೇತ್ರ ಕರಿಂಜೆಯ ಪರಮ ಪೂಜ್ಯ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿಯವರು ಮತ್ತು ಕೊಂಡೆವೂರು ಮಠದ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಶ್ರೀ ಕೆ.ನಾರಾಯಣ, ಮಾನ್ಯ ರಾಜ್ಯಸಭಾ ಸದಸ್ಯರು(ಅಧ್ಯಕ್ಷರು, ಯಾಗ ಸಮಿತಿ)ಶ್ರೀ ಸದಾಶಿವ ಶೆಟ್ಟಿ ಕುಳೂರು, ಕನ್ಯಾನ(ಗೌರವಾಧ್ಯಕ್ಷರು ಯಾಗ ಸಮಿತಿ) ರಮೇಶ್ ರಾಜು ಚೆಯರ್‌ಮನ್, ಆಕ್ಸಫರ್ಡ್ ವಿದ್ಯಾಸಂಸ್ಥೆಗಳು ಬೆಂಗಳೂರು, ಡಾ.ಕೆ.ಸಿ.ರಾಮಮೂರ್ತಿ, ಐ.ಪಿ.ಎಸ್, ಮಾಜಿ ರಾಜ್ಯಸಭಾ ಸದಸ್ಯರು, ಬೆಂಗಳೂರು, ಕೆ ಕೆ ಶೆಟ್ಟಿ, ವಿಶ್ವನಾಥ್ ವೆಂಗರೆ, ಡಾ.ಮೋಹನ್‌ದಾಸ್ ಬೆಂಗಳೂರು, ಎಮ್ ಪಿ ಉಮಾಶಂಕರ್, ಬೆಂಗಳೂರು, ಎ.ಜೆ ಶೇಖರ್, ತೊಕ್ಕೊಟ್ಟು, ಪ್ರದೀಪ್ ಕುಮಾರ್ ಕಲ್ಕೂರ ಮೊದಲಾದವರು ಗೌರವ ಉಪಸ್ಥಿತರಿದ್ದರು.
ಯಾಗ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಕೊಂಡೆವೂರು ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಪ್ರಮುಖರಾದ ದಿನಕರ್ ಹೊಸಂಗಡಿ ಯವರು ಕಾರ್ಯಕ್ರಮವನ್ನು ನಿರೂಪಿಸಿದರು.