ಉಡುಪಿ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಇತಿಹಾಸ ಪ್ರಸಿದ್ಧ ಕಾಪು ಕ್ಷೇತ್ರದ ಮೂರು ಮಾರಿಗುಡಿಗಳಲ್ಲಿ ಸುಗ್ಗಿ ಮಾರಿ ಪೂಜೆ ಸಂಭ್ರಮದಿಂದ ನಡೆಯಿತು.
ರಾತ್ರಿಯಿಂದಲೇ ಲಕ್ಷಾಂತರ ಭಕ್ತರು ಬಂದು ಮಾರಿಯಮ್ಮನ ದರ್ಶನ ಕೈಗೊಂಡರು. ಉಡುಪಿ ಜಿಲ್ಲೆ ಮಾತ್ರವಲ್ಲದೆ ಕರಾವಳಿ, ಮಲೆನಾಡು ಭಾಗದ ಲಕ್ಷಾಂತರ ಭಕ್ತರು ಈ ಕ್ಷೇತ್ರಗಳಿಗೆ ಬರುತ್ತಾರೆ. ನಿರಂತರ ಎರಡು ದಿನಗಳ ಕಾಲ ಭಕ್ತ ಜನಸಾಗರ ಹರಿದು ಬರುತ್ತದೆ.
ಉಡುಪಿ ಜಿಲ್ಲೆಯ ಅತಿ ದೊಡ್ಡ ಜಾತ್ರೆಗಳಲ್ಲಿ ಕಾಪು ಮಾರಿ ಜಾತ್ರೆಯೂ ಒಂದು. ಕ್ಷೇತ್ರಕ್ಕೆ ಬಂದು ಪೂಜೆ ಸಲ್ಲಿಸಿದ ಬಳಿಕ ಭಕ್ತರು ತಮ್ಮ ಮನೆಗಳಿಗೆ ತೆರಳಿ ಹಬ್ಬದೂಟ ಮಾಡುವ ಸಂಪ್ರದಾಯ. ಕಾಪು ಪರಿಸರದಲ್ಲಿ ಒಟ್ಟು ಮೂರು ಮಾರಿಗುಡಿಗಳಿದ್ದು ಹಳೆ ಮಾರಿಗುಡಿ, ಹೊಸ ಮಾರಿಗುಡಿ ಮತ್ತು ಕಲ್ಯ ಮಾರಿಗುಡಿಗಳಲ್ಲಿ ಈ ಆಚರಣೆಗಳು ನಡೆಯುತ್ತವೆ.