ಬಂಟ್ವಾಳ: ಭಾರತ ಚುನಾವಣಾ ಆಯೋಗ, ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್‌ಸಮಿತಿ, ಬಂಟ್ವಾಳ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಮಾ.28ರಂದು ಬಂಟ್ವಾಳ ತಾಲೂಕಿನ ಸಜೀಪಮುನ್ನೂರು, ಮಂಚಿ, ವೀರಕಂಭ, ಮಾಣಿ, ಗೋಳ್ತಮಜಲು ಗ್ರಾಮ ಪಂಚಾಯತಿಯಲ್ಲಿ ಮತದಾನ ಜಾಗೃತಿ ಅಭಿಯಾನ ಹಾಗೂ ಜಾಥಾ ನಡೆಯಿತು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಕಾಂಬ್ಲೆ ಮಾತನಾಡಿ, ಯಾವುದೇ ಆಮಿಷಗಳಿಗೆ, ಆಸೆಗಳಿಗೆ ಬಲಿಯಾಗದೇ ಮತ ಹಾಕಬೇಕು. ಮತದಾನ ನಮ್ಮ ಆದ್ಯ ಕರ್ತವ್ಯವಾಗಿದ್ದು, ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಿ ಅರ್ಹ ವ್ಯಕ್ತಿಯನ್ನು ಚುನಾಯಿಸುವುದರಿಂದ ದೇಶದ ಅಭಿವೃದ್ಧಿ ಸಾಧ್ಯ. ಆ ಮೂಲಕ ನಮ್ಮ ಕರ್ತವ್ಯವನ್ನು ನಿಭಾಯಿಸಬೇಕು ಎಂದು ಹೇಳಿದರು.
ಸ್ವೀಪ್ ತಾಲೂಕು ತರಬೇತುದಾರರಾದ ಸುರೇಖಾ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಒಂದು ಮತವೂ ಮುಖ್ಯ. ನಾನೊಬ್ಬ ಮತ ಹಾಕದಿದ್ದರೆ ಏನಾಗುತ್ತದೆ ಎಂಬ ಮನೋಭಾವನೆ ಒಳ್ಳೆಯದಲ್ಲ. ಪ್ರತಿಯೊಬ್ಬರೂ ಮತ ಚಲಾಯಿಸುವ ಮೂಲಕ ಕರ್ತವ್ಯ ನಿಭಾಯಿಸಬೇಕು ಎಂದು ಹೇಳಿದರು.
ಸ್ವೀಪ್ ಜಿಲ್ಲಾ ತರಬೇತುದಾರರಾದ ವಿಠಲ್ ನಾಯಕ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯು ನಮ್ಮ ದೇಶದಲ್ಲಿ ಅತಿ ಪ್ರಾಮುಖ್ಯತೆಯನ್ನು ಪಡೆದಿದ್ದು, ಈ ವ್ಯವಸ್ಥೆಯಲ್ಲಿ ಪ್ರಜೆಗಳ ಪ್ರತಿನಿಧಿಯನ್ನಾಗಿ ಆಯ್ಕೆ ಮಾಡಲು ನಾವೆಲ್ಲರೂ ಹಕ್ಕುಳ್ಳವರಾಗಿದ್ದೇವೆ. ಆದ್ದರಿಂದ ಮತದಾನ ಮಾಡುವ ಮೂಲಕ ನಮ್ಮ ಹಕ್ಕನ್ನು ಚಲಾಯಿಸಿ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿರುತ್ತದೆ. ಇದನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದರು.
ಸಜೀಪಮುನ್ನೂರು, ಮಂಚಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮತದಾನ ಜಾಗೃತಿ ಜಾಥಾ ನಡೆಸಲಾಯಿತು. ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ತಾಲೂಕು ಪಂಚಾಯತ್ ಸಿಬ್ಬಂದಿ ಪ್ರಶಾಂತ್, ಮಂಚಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿರ್ಮಲ, ಮಾಣಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರೀಜಾ, ವೀರಕಂಭ ಗ್ರಾಮ ಪಂಚಾಯತ್ ಕಾರ್ಯದರ್ಶಿ ಸವಿತಾ, ಸಜೀಪಮುನ್ನೂರು ಗ್ರಾಮ ಪಂಚಾಯತ್ SDA ಮೀನಾಕ್ಷಿ, ಗೋಳ್ತಮಜಲು ಗ್ರಾಮ ಪಂಚಾಯತ್ SDA ಚಿತ್ರಾ, ತಾಲೂಕು ಐಇಸಿ ಸಂಯೋಜಕ ರಾಜೇಶ್, ಎನ್ನೆಆರ್ ಎಲ್ ಎಮ್ ತಾಲೂಕು ವ್ಯವಸ್ಥಾಪಕ ಪ್ರದೀಪ್ ಕಾಮತ್, ಗ್ರಾಮ ಪಂಚಾಯತ್ ಸದಸ್ಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಸ್ಥಳೀಯ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು, ಗ್ರಾಮ ಪಂಚಾಯತ್ ಸಿಬ್ಬಂದಿ ಇತರರು ಭಾಗವಹಿಸಿದ್ದರು.