ಉಡುಪಿ: ಸಮುದ್ರದ ಅಲೆಗಳ ಸೆಳೆತಕ್ಕೆ ಕೊಚ್ಚಿಹೋದ ಮೂರು ಜನರ ಪೈಕಿ ಓರ್ವ ಮೃತಪಟ್ಟಿದ್ದು, ಇಬ್ಬರನ್ನು ರಕ್ಷಣೆ ಮಾಡಿದ ಘಟನೆ ಮಲ್ಪೆ ಬೀಚ್ ನಲ್ಲಿ ಇಂದು ಸಂಭವಿಸಿದೆ.
ಮೃತರನ್ನು ಹಾಸನ ಜಿಲ್ಲೆಯ ದಾಬೆಬೇಲೂರು ನಿವಾಸಿ ಗಿರೀಶ್ ಎಂದು ಗುರುತಿಸಲಾಗಿದೆ. ಸಂತೋಷ್ ಹಾಗೂ ಮತ್ತೊಬ್ಬರನ್ನು ರಕ್ಷಿಸಲಾಗಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಬೆಬೇಲೂರಿನಿಂದ 20 ಜನರು ಮಲ್ಪೆ ಬೀಚ್ ಗೆ ಪ್ರವಾಸಕ್ಕೆ ಬಂದಿದ್ದರು.
ಸಮುದ್ರಕ್ಕಿಳಿದು ಸ್ನಾನ ಮಾಡುತ್ತಿದ್ದಾಗ ಮೂವರು ಅಲೆಗಳ ಸೆಳೆತಕ್ಕೆ ಕೊಚ್ಚಿಹೋಗಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ತಂಡದವರು ಮೂವರನ್ನು ರಕ್ಷಿಸಿ, ದಡಕ್ಕೆ ತಂದಿದ್ದಾರೆ. ಮೂವರ ಪೈಕಿ ಗಂಭೀರ ಸ್ಥಿತಿಯಲ್ಲಿದ್ದ ಗಿರೀಶ್ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಇಬ್ಬರು ಬಚಾವ್ ಆಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.