ಉಡುಪಿ: ಕಾಂಗ್ರೆಸ್ ಪಕ್ಷವು ಮಹಿಳೆಯರಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ನೀಡುವ ಭರವಸೆ ಪ್ರಣಾಳಿಕೆಯಲ್ಲಿ ನೀಡಿದೆ. ದೇಶದ 75 ಲಕ್ಷ ಮಹಿಳೆಯರಿಗೆ ಇದನ್ನು ನೀಡಬೇಕಾಗುತ್ತದೆ. ಆದರೆ, ನೀವು 75 ಲಕ್ಷ ಕೋಟಿ ರೂಪಾಯಿ ಎಲ್ಲಿಂದ ತರುತ್ತೀರಿ ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಪ್ರಶ್ನಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವೆ, ಇಷ್ಟೊಂದು ದೊಡ್ಡ ಮಟ್ಟದ ಹಣ ಎಲ್ಲಿಂದ ಬರುತ್ತೆ ಎಂದು ಕೇಳಬೇಕು. ಕಾಂಗ್ರೆಸ್ ಜನರನ್ನು ಮುಗ್ಧರು ಎಂದು ಭಾವಿಸಿ ಸುಳ್ಳು ಹೇಳುತ್ತಿದೆ. ಚುನಾವಣೆ ಗೆದ್ದ ಮೇಲೆ ನೋಡಿದರಾಯಿತು ಎಂಬ ಭಾವನೆ ಆ ಪಕ್ಷಕ್ಕಿದೆ ಎಂದರು.
ಮಹಿಳೆಯರಿಗೆ ಕಾಂಗ್ರೆಸ್ ಪಕ್ಷವು ಕನಿಷ್ಠ ಟಾಯ್ಲೆಟ್ ಕೂಡ ಕಟ್ಟಿಸಿಕೊಡಲಿಲ್ಲ. ಅವರ ಅವಧಿಯಲ್ಲಿ ಕೇವಲ ಶೇಕಡ 30ರಷ್ಟು ಇದ್ದ ಶೌಚಾಲಯ, ಈಗ ಶೇಕಡ 90 ರಷ್ಟು ಆಗಿದೆ. ಕೇವಲ ಎಂಟು ಕೋಟಿ ಇದ್ದ ಬ್ಯಾಂಕ್ ಅಕೌಂಟ್ ಈಗ 52 ಕೋಟಿಗೆ ಏರಿದೆ. ಇದರಿಂದ ಶೇಕಡ 79 ರಷ್ಟು ಮಹಿಳೆಯರಿಗೆ ಅನುಕೂಲವಾಗಿದೆ. ಮಹಿಳೆಯರ ಶ್ರೇಯೋಭಿವೃದ್ಧಿಗೆ ಪ್ರಧಾನಿ ಮೋದಿ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಕೇವಲ ಒಂದು ರೂಪಾಯಿಯಲ್ಲಿ ಸ್ಯಾನಿಟರಿ ಪ್ಯಾಡ್ ನೀಡಿ ಮಹಿಳೆಯರ ಆತ್ಮಗೌರವ ಹೆಚ್ಚಿಸಿದ್ದಾರೆ. ಮಹಿಳೆಯರು ಕಟ್ಟಿದ ರಾಖಿಯ ಗೌರವವನ್ನು ಮೋದಿ ಹೆಚ್ಚಿಸಿದ್ದಾರೆ ಎಂದು ಹೇಳಿದರು.