ಉಡುಪಿ: ದೇಶಕ್ಕೆ ದಕ್ಷತೆಯಿಂದ ಕೆಲಸ ಮಾಡುವ ಉತ್ತಮ ಆಡಳಿತಗಾರ ಬೇಕೇ ಹೊರತು ಕಮಿಂಟಿಯೇಟರ್ ಅಲ್ಲ. ಮೋದಿ ಈಗ ಎನ್ ಡಿಎ, ಬಿಜೆಪಿ ಬಿಟ್ಟು ‘ಮೋದಿ ಗ್ಯಾರಂಟಿ’ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಈ ಬಗ್ಗೆ ಈಗಾಗಲೇ ಜನ ಎಚ್ಚೆತ್ತುಕೊಂಡಿದ್ದಾರೆ. ಇವರು 400 ಅಲ್ಲ 150ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಹೇಳಿದರು.
ಉಡುಪಿ ಕಾಂಗ್ರೆಸ್ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಜನತೆಯಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಹತಾಶ ಭಾವನೆ ಮೂಡುತ್ತಿದೆ. ಇದರ ಪರಿಣಾಮ ನಾಗಲ್ಯಾಂಡ್ನಲ್ಲಿ ನಾಲ್ಕು ಲಕ್ಷ ಮಂದಿ ಚುನಾವಣಾ ಬಹಿಷ್ಕಾರ ಮಾಡಿದರು. ಜನತೆಯ ಹೃದಯದಲ್ಲಿ ಒಂದು ರೀತಿಯ ಲಾವರಸದ ಒಳ ಹರಿಯುತ್ತಿದೆ. ಆ ಲಾವರಸ ಈ ಬಾರಿಯ ಚುನಾವಣೆಯಲ್ಲಿ ಜ್ವಾಲಮುಖಿಯಾಗಿ ಸ್ಫೋಟಗೊಳ್ಳಲಿದೆ ಎಂದರು.
ದೇಶದ ಶಾಂತಿ ನೆಮ್ಮದಿ ಕಾಪಾಡಬೇಕಾದ ಒಬ್ಬ ಪ್ರಧಾನಿ, ಜನಾಂಗ ದ್ವೇಷ ಹರಡುವ ಕೆಲಸ ಮಾಡುತ್ತಿರುವುದು ಅಪಾಯಕಾರಿ.
ಜನಾಂಗೀಯ ದ್ವೇಷದಿಂದ ಆ ವ್ಯಕ್ತಿಗಳು ಹಾಗೂ ಇಡೀ ದೇಶವೇ ನಾಶವಾಗುತ್ತದೆ. ನರೇಂದ್ರ ಮೋದಿಯ ಈ ನಡೆ ದೇಶಕ್ಕೆ ಒಳ್ಳೆಯದಲ್ಲ. 2014ರಲ್ಲಿ ಡಾ.ಮನಮೋಹನ್ ಸಿಂಗ್ ಸರಕಾರದ ವಿರುದ್ಧ ಆರೋಪ ಮಾಡಿ, 2019ರಲ್ಲಿ ದೇಶಭಕ್ತಿ ಭಾವನೆ ಪ್ರಚೋದಿಸಿ ಸರ್ಜಿಕಲ್ ಸ್ಟ್ರೈಕ್ ಹೆಸರಿನಲ್ಲಿ ಇವರು ಅಧಿಕಾರಕ್ಕೆ ಬಂದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಅಂತಹ ಯಾವುದೇ ಗಿಮಿಕ್ ನಡೆಯುವುದಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್, ನಟ ಶಿವರಾಜ್ ಕುಮಾರ್, ಮುಖಂಡರಾದ ವಿನಯ ಕುಮಾರ್ ಸೊರಕೆ, ಗೋಪಾಲ ಪೂಜಾರಿ, ಅಶೋಕ್ ಕುಮಾರ್ ಕೊಡವೂರು, ಎಂ.ಎ. ಗಫೂರ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ಉದಯ ಕುಮಾರ್ ಶೆಟ್ಟಿ ಮುನಿಯಾಲು, ಡಿ.ಆರ್.ರಾಜು, ಭಾಸ್ಕ ರಾವ್ ಕಿದಿಯೂರು, ನವೀನ್ ಶೆಟ್ಟಿ ಉಪಸ್ಥಿತರಿದ್ದರು.