ಉಡುಪಿ: ಒಂದು ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳವುಗೈದು ಬಿಹಾರಕ್ಕೆ ಸಾಗಿಸುತ್ತಿದ್ದ ಅಂತರ್ ರಾಜ್ಯ ಕಳವು ಆರೋಪಿಯೋರ್ವನನ್ನು ಕೋಟ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಹಾರ ರಾಜ್ಯದ ಸೀತಾಮರಿ ಜಿಲ್ಲೆಯ ನಿವಾಸಿ ಮುಹಮ್ಮದ್ ಇರ್ಫಾನ್ (35) ಬಂಧಿತ ಆರೋಪಿ. ಈತ ಎ.20ರಂದು ಕೇರಳದ ಚಿತ್ರ ನಿರ್ಮಾಪಕ ಜೋಶಿಯವರ ಕೊಚ್ಚಿ ಪನಂಪಲ್ಲಿಯ ಮನೆಯಲ್ಲಿ ಒಂದು ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದು ಬಿಹಾರಕ್ಕೆ ಸಾಗಿಸುತ್ತಿದ್ದನು. ಖಚಿತ ಮಾಹಿತಿಯನ್ನು ಆಧರಿಸಿ ಕೋಟ ಪೊಲೀಸರು ಮೂರ್ಕೈ ಸಮೀಪ ಶನಿವಾರ ಸಂಜೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳವು ನಡೆದ ಸಂದರ್ಭ ಚಲನಚಿತ್ರ ನಿರ್ಮಾಪಕ ಜೋಶಿಯವರ ಮನೆಯಲ್ಲಿ ಯಾರೂ ಇಲ್ಲದಿದ್ದ ಕಾರಣ ಕಳ್ಳತನ ಆಗಿರುವ ಕುರಿತು ಅವರಿಗೆ ಮಾಹಿತಿ ಇರಲಿಲ್ಲ. ಹಾಗಾಗಿ ಪೊಲೀಸರಿಗೂ ದೂರು ಬಂದಿರಲಿಲ್ಲ. ಆದರೆ ಶಂಕಿತ ವಾಹನವೊಂದು ರಾಜ್ಯದಲ್ಲಿ ಸಂಚರಿಸಿದ್ದಲ್ಲದೆ ಕರ್ನಾಟಕದತ್ತ ಸಾಗಿದೆ ಎಂಬ ಮಾಹಿತಿ ಅರಿತ ಕೇರಳ ಪೊಲೀಸರು ಆ ಬಗ್ಗೆ ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಕೋಟ ಠಾಣೆಯ ಎಸ್ಸೈ ತೇಜಸ್ವಿ, ಅಪರಾಧ ವಿಭಾಗದ ಎಸ್ಸೈ ಸುಧಾ ಪ್ರಭು ಮತ್ತು ಸಿಬ್ಬಂದಿ ಗೋಪಾಲ ಪೂಜಾರಿ, ಪ್ರಸನ್ನ, ವಿಜಯೇಂದ್ರ ಮೊದಲಾದವರು ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಶಂಕಿತ ಕಾರನ್ನು ತಡೆಯಲು ಯತ್ನಿಸಿದರು.
ಆದರೆ ಚಾಲಕನು ಕಾರನ್ನು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ. ಹಿಂಬಾಲಿಸಿದ ಪೊಲೀಸರು ಕೋಟ ಮೂರುಕೈ ಸಮೀಪದಲ್ಲಿ ತಮ್ಮ ವಾಹನವನ್ನು ಅಡ್ಡ ನಿಲ್ಲಿಸಿ ಕಾರನ್ನು ತಡೆದು ವಶಕ್ಕೆ ಪರಿಶೀಲಿಸಿದಾಗ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ. ವಿಚಾರಿಸಿದಾಗ ಆರೋಪಿಯು ಕೇರಳದಲ್ಲಿ ಕಳವು ಕೃತ್ಯ ಎಸಗಿ ಬಿಹಾರಕ್ಕೆ ಪರಾರಿಯಾಗುತ್ತಿರುವುದಾಗಿ ತಿಳಿಸಿದ್ದಾನೆ.