ಬಂಟ್ವಾಳ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಮಾಜಿ ಸೈನಿಕರೊಬ್ಬರು ಮತದಾನ ಪೂರೈಸಿ ಮರಳಿ ಆಸ್ಪತ್ರೆಗೆ ದಾಖಲಾಗಿದ್ದು, ಈಗ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಬಂಟ್ವಾಳ ವಗ್ಗ ನಿವಾಸಿ, ನಿವೃತ್ತ ಯೋಧ ಮಾಧವ ಪ್ರಭು(85) ಎಂಬವರೇ ಅನಾರೋಗ್ಯದ ನಡುವೆಯೇ ಪವಿತ್ರ ಮತದಾನ ಕರ್ತವ್ಯ ಪೂರೈಸಿದವರು.
ಮಾಧವ ಪ್ರಭುಗಳು ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 85 ವರ್ಷ ಮತ್ತು ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನಕ್ಕೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಮಾಧವ ಪ್ರಭುಗಳು ವೈದ್ಯರ ಅನುಮತಿ ಪಡೆದು ನೇರವಾಗಿ ಮನೆಗೆ ತೆರಳಿ ಅಲ್ಲಿ ಏ.15ರಂದು ಮತದಾನ ಕರ್ತವ್ಯ ಪೂರೈಸಿ ಆಸ್ಪತ್ರೆಗೆ ಮರಳಿದ್ದರು.
ಮಾಧವ ಪ್ರಭುಗಳು ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದಾರೆ. ಸೈನ್ಯಕ್ಕೆ ಸೇರುವ ಮೊದಲು ಮಲೇರಿಯಾ ನಿರ್ಮೂಲನಾ ವಿಭಾಗದ ಇನ್‌ಸ್ಪೆಕ್ಟರ್ ಆಗಿದ್ದರು. ಸೈನ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ನಂತರ ಇವರು ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿ ಹಾಗೂ ಪುತ್ರರನ್ನು ಅಗಲಿದ್ದಾರೆ.