ಉಡುಪಿ: ನಮಗೆ ಬೇಕಾಗಿರುವ ಸರಕಾರ ರೂಪಿಸುವ ದೊಡ್ಡ ಬದ್ಧತೆ ಪ್ರಜೆಗಳ ಮೇಲೆ ಇದೆ. ಹೀಗಾಗಿ ಎಲ್ಲಾ ಪ್ರಜೆಗಳು ತಪ್ಪದೇ ಮತದಾನ ಮಾಡಬೇಕು. ಯಾರು ಕೂಡ ಮತದಾನದಿಂದ ದೂರ ಉಳಿಯಬಾರದು ಎಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾನ ಮಾಡಿ ತುಂಬಾ ಹೆಮ್ಮೆ ಅನಿಸುತ್ತಿದೆ. ರಾಮದೇವರ ಪ್ರಾಣ ಪ್ರತಿಷ್ಠೆ ಮಾಡಿದಾಗ ಅನುಭವಿಸಿದ ಧನ್ಯತಾಭಾವ ಈಗಲೂ ಅನುಭವಿಸಿದ್ದೇವೆ. ದೇಶದಲ್ಲಿ ಎಲ್ಲಾ ಬಗೆಯ ಜನ ಎಲ್ಲಾ ಕಾಲಕ್ಕೂ ಇರುತ್ತಾರೆ. ನೆಲದ ಸಂಸ್ಕೃತಿಯನ್ನು ಗೌರವಿಸುವ ಸರಕಾರವನ್ನು ರೂಪಿಸುವ ಅವಕಾಶ ನಮಗೆ ಇದೆ. ಸಮಾಜದ ಪ್ರಸಕ್ತ ವಾತಾವರಣವನ್ನು ಅರ್ಥ ಮಾಡಿಕೊಂಡು ಮತದಾನ ಮಾಡಬೇಕು. ನಮಗೆ ಬೇಕಾಗಿರುವ ಸರ್ಕಾರವನ್ನು ರೂಪಿಸಬೇಕು ಎಂದರು.
ಪ್ರಧಾನಿ ಸರ್ವಾಧಿಕಾರಿ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಧಾನಿ ಇದ್ದಾನೆ ಅಂದ್ರೆ ಅವನು ಸರ್ವಾಧಿಕಾರಿ ಆಗುವುದು ಹೇಗೆ. ಪ್ರಜೆಗಳು ತಮಗೆ ಬೇಕಾದ ಸರ್ಕಾರ ರೂಪಿಸುತ್ತಿದ್ದಾರೆ. ಅದನ್ನು ಆಕ್ಷೇಪಿಸಿದರೆ ಸಾರ್ವಕಾಲಿಕ ಆಕ್ಷೇಪ ಆಗುತ್ತದೆ ಎಂದು ಹೇಳಿದರು.
ಮತದಾನ ಪ್ರಮಾಣ ಕಡಿಮೆ ಆಗಬಾರದು. ವ್ಯವಸ್ಥೆ ನಮಗೆ ಅನುಕೂಲವಾಗಿಲ್ಲ ಅಂತ ದೂರುತ್ತೇವೆ. ಹಾಗಾದರೆ ವ್ಯವಸ್ಥೆಯನ್ನು ಸರಿ ಮಾಡುವುದು ಯಾರು. ಮತದಾನದಿಂದ ದೂರ ಉಳಿದವರಿಗೆ ಈ ದೇಶದ ನಾಗರಿಕರೇ ಅಲ್ಲ. ಅವರಿಗೆ ಸಿಟಿಜನ್ ಶಿಪ್ ಕೊಡಬಾರದು. ಅದು ಕಠೋರ ನಿಲುವು, ಆದರೆ ಅದು ಅವಶ್ಯಕವಾಗಿ ಬೇಕು. ಸರ್ಕಾರ ನೀಡುವ ಸವಲತ್ತುಗಳನ್ನು ಬಂದ್ ಮಾಡಬೇಕು. ಅವರನ್ನು ದ್ವಿತೀಯ ತೃತೀಯ ದರ್ಜೆಯ ನಾಗರಿಕರನ್ನಾಗಿ ಪರಿಗಣಿಸಬೇಕು. ಆಗ ಪರಿಸ್ಥಿತಿ ಸುಧಾರಿಸಬಹುದು. ಪ್ರಜೆಗಳು ಎಚ್ಚೆತ್ತುಕೊಳ್ಳುತ್ತಿಲ್ಲ ಅಂದ್ರೆ ಕಠೋರ ನಿಲುವು ಅನಿವಾರ್ಯ. ನೋಟ ಸಹಜ ಪ್ರಕ್ರಿಯೆ ಆಗಿರಬೇಕು. ಅದನ್ನು ಹೇರುವ ಒತ್ತಡ ಮಾಡುವ ಕೆಲಸ ಆಗಬಾರದು ಎಂದರು.