ಉಡುಪಿ: ಪುಣೆಯಿಂದ ಕುಂದಾಪುರಕ್ಕೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಉದ್ಯಮಿಯೋರ್ವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮೃತರನ್ನು ಸಿದ್ದಾಪುರ ಸಮೀಪದ ಉಳ್ಳೂರು-74 ಗ್ರಾಮದ ನೂಜಿನಬೈಲು ನಿವಾಸಿ, ಉದ್ಯಮಿ, ಸಮಾಜ ಸೇವಕ ಪ್ರಶಾಂತ್ ಶೆಟ್ಟಿ (50) ಎಂದು ಗುರುತಿಸಲಾಗಿದೆ. ಮೇ 1ರಂದು ಹೊನ್ನಾವರದಲ್ಲಿ ಈ ಘಟನೆ ನಡೆದಿದೆ. ಹೊನ್ನಾವರ ತಲುಪಿದಾಗ ಪ್ರಶಾಂತ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಬಸ್ ಕಂಡಕ್ಟರ್‌ಗೆ ವಿಷಯ ತಿಳಿಸಿದರು. ಕೂಡಲೇ ಅವರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ದುರದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದಿದ್ದಾರೆ. ಅವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಪ್ರಶಾಂತ್ ಹಲವು ವರ್ಷಗಳಿಂದ ಪುಣೆಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದರು.. ನಂತರ ಬಾಬಾಸ್ ಕಿಚನ್ ಅನ್ನು ಸ್ಥಾಪಿಸಿದರು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ಅವರು ಸಿದ್ದಾಪುರದಲ್ಲಿ ಶ್ಯಾಮಲಾ ಪ್ಯಾಲೇಸ್ ಮದುವೆ ಮಂಟಪ ಮತ್ತು ಪ್ರಶ್ವಿನ್ ಇನ್ ಲಾಡ್ಜ್ ಅನ್ನು ಸ್ಥಾಪಿಸಿದ್ದರು. ಮುಂಬಯಿ ಬಂಟರ ಸಂಘದ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅವರು, ಕುಂದಾಪುರ ಯುವ ಬಂಟರ ಸಂಘ ಹಾಗೂ ಸಿದ್ದಾಪುರ ಯಕ್ಷ ನುಡಿಸಿರಿಯಲ್ಲಿ ಸಕ್ರಿಯರಾಗಿದ್ದರು.