ಉಡುಪಿ: ಇತಿಹಾಸ ಪ್ರಸಿದ್ಧ ಕಾಪು ಶ್ರೀಬ್ರಹ್ಮ ಮುಗ್ಗೇರ್ಕಳ-ಪಿಲಿಚಂಡಿ ದೈವಸ್ಥಾನದಲ್ಲಿ ದ್ವೈ ವಾರ್ಷಿಕವಾಗಿ ನಡೆಯುವ ಪಿಲಿ ಕೋಲವು ವಿಶೇಷ ಜನಾಕರ್ಷಣೆಯೊಂದಿಗೆ ಸಂಪನ್ನಗೊಂಡಿತು.
ಎರಡು ತಾಸಿನ ಬಣ್ಣಗಾರಿಕೆಯ ಬಳಿಕ ಅಬ್ಬರದೊಂದಿಗೆ ಪಂಜರದೊಳಗಿಂದ ಹೊರಗೆ ಬಂದ ಪಿಲಿಚಂಡಿ ದೈವವು ಬ್ರಹ್ಮರ ಗುಂಡಕ್ಕೆ ಮೂರು ಸುತ್ತು ಬಂದು, ಮಾರಿಯಮ್ಮ ಗುಡಿಯ ಮುಂಭಾಗದಲ್ಲಿ ನೆಡಲಾಗಿದ್ದ ಬಂಟ ಕಂಬವನ್ನೇರಿ ಜೀವಂತ ಕೋಳಿಯನ್ನು ಬಲಿಯಾಗಿ ಸ್ವೀಕರಿಸಿ ಮುಂದೆ ಗ್ರಾಮ ಭೇಟಿಗೆ ತೆರಳುವುದು ಸಂಪ್ರದಾಯವಾಗಿದೆ.
ಕರಾವಳಿಯಲ್ಲಿ ಹಲವು ಬಗೆಯ ಭೂತಾರಾಧನೆಗಳಿವೆ. ಆದರೆ ಹುಲಿಕೋಲದಂತಹ ಆಚರಣೆಗಳು ಬೇರೆಲ್ಲೂ ಕಾಣಸಿಗಲ್ಲ. ಹುಲಿ ವೇಷದಲ್ಲಿರುವ ಈ ಆವೇಶಧಾರಿಯು ಯಾರನ್ನಾದರೂ ಸ್ಪರ್ಶಿಸಿದರೆ, ಮತ್ತೆರಡು ವರ್ಷದೊಳಗೆ ಆತ ಅಸುನೀಗುತ್ತಾನೆ ಅನ್ನೋದು ಹಿರೀಕರ ನಂಬಿಕೆ. ಹಾಗಾಗಿ ಇಷ್ಟದೇವರಾದರೂ ಹುಲಿ ದೇವರನ್ನು ಕಂಡರೆ ಜನ ಈ ರೀತಿ ದಿಕ್ಕಾಪಾಲಾಗಿ ಓಡಾತ್ತಾರೆ.
ಈ ಬಾರಿಯ ನಗರ ಪ್ರದಕ್ಷಿಣೆ ಮತ್ತು ಗ್ರಾಮ ಸಂಚಾರದ ವೇಳೆ ಪಿಲಿ ಭೂತವು ಓರ್ವನನ್ನು ಸ್ಪರ್ಶಿಸಿದ್ದು, ಸ್ಪರ್ಶಿಸಿದ ಬಳಿಕ ದೈವಸ್ಥಾನಕ್ಕೆ ಓಡಿ ಬಂದು ಪೂರ್ವ ಸಂಪ್ರದಾಯದ ಪದ್ಧತಿಗಳನ್ನು ನೆರವೇರಿಸಲಾಯಿತು.
ಭೀತಿಯ ನೆರಳಲ್ಲೇ ನಂಬಿಕೆ ಅರಳಿರುವುದರಿಂದ ಪಿಲಿಕೋಲದ ಬಗ್ಗೆ ಇಂದಿಗೂ ವಿಶೇಷ ಆಕರ್ಷಣೆ ಇದೆ. ತನಗಿಂತ ಯಾರೂ ಮಿಗಿಲಿಲ್ಲ ಎಂಬ ಅಹಂಕಾರ ಮನುಷ್ಯರಿಗೆ ಬಾರದಿರಲಿ ಎಂಬ ಸಂದೇಶದ ಜೊತೆಗೆ ಕಾಡುಪ್ರಾಣಿಗಳಲ್ಲೂ ದೇವರನ್ನು ಕಾಣುವ ಕರಾವಳಿಗರ ವಿಶಿಷ್ಟ ಆಚರಣೆಗೆ ಈ ಪಿಲಿಕೋಲ ಸಾಕ್ಷಿ.