ಬೆಳ್ತಂಗಡಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪೊಲೀಸರ ಜೊತೆಯಲ್ಲಿ ಉದ್ಧಟತನದಿಂದ ವರ್ತಿಸಿದ್ದ ಶಾಸಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬೆಳ್ತಂಗಡಿಯ ಮೇಲಂತಬೆಟ್ಟು ಎಂಬಲ್ಲಿ ಅಕ್ರಮ ಗಣಿಗಾರಿಕೆಗೆ ಪೊಲೀಸರ ಸಹಕಾರ ಪಡೆದು ತಹಶೀಲ್ದಾರ್ ದಾಳಿ ನಡೆಸಿದ್ದರು. ಈ ವೇಳೆ ಅದು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿ ಹಾಗೂ ಬಿಜೆಪಿ ಮುಖಂಡ ಪ್ರಮೋದ್ ಗೌಡ ಎಂಬವರಿಗೆ ಸೇರಿದ್ದಾಗಿ ತಿಳಿದು ಬಂದಿತ್ತು. ಈ ಹಿನ್ನಲೆಯಲ್ಲಿ ಶಶಿರಾಜ್ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದು ತಂದಿದ್ದರು. ಈ ವಿಚಾರ ತಿಳಿದು ಠಾಣೆಗೆ ಆಗಮಿಸಿದ್ದ ಶಾಸಕ ಹರೀಶ್ ಪೂಂಜಾ ಠಾಣೆಯಲ್ಲಿ ಪೊಲೀಸರ ಜೊತೆಯಲ್ಲಿ ಅನುಚಿತವಾಗಿ ವರ್ತಿಸಿ ಬೆದರಿಕೆ ಕೂಡಾ ಹಾಕಿದ್ದರು. ಶಾಸಕ ಹರೀಶ್ ಪೂಂಜಾ ನಡವಳಿಕೆಯ ಬಗ್ಗೆ ವ್ಯಾಪಕ ಟೀಕೆ ಕೂಡಾ ವ್ಯಕ್ತವಾಗಿದ್ದು, ಪೊಲೀಸರು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಲಾಗಿತ್ತು. ಇದೀಗ ಹಿರಿಯ ಅಧಿಕಾರಿಗಳ ಸೂಚನೆಯಂತೆ ಶಾಸಕ ಹರೀಶ್ ಪೂಂಜಾ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. IPC 353 ,504 ಅಡಿಯಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ.