ಬಂಟ್ವಾಳ : ಸರಪಾಡಿ ಸಮೀಪದ ಹಂಚಿಕಟ್ಟೆ ಎಂಬಲ್ಲಿ 30 ಅಡಿ ಆಳದ ಬಾವಿಗೆ ಬಿದ್ದ ಮೂರು ವರ್ಷದ ಮಗುವೊಂದನ್ನು ತನ್ನ ಪ್ರಾಣದ ಹಂಗು ತೊರೆದು ಮೇಲಕ್ಕೆತ್ತಿದ ಯುವಕನ ಕುರಿತು ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.
ಹಂಚಿಕಟ್ಟೆ ನಿವಾಸಿ ನೋಣಯ್ಯ ನಾಯ್ಕ ಅವರ ಮನೆಯ ಅಂಗಳದಲ್ಲಿ ಬಾವಿಯೊಂದಿದ್ದು, ಅದಕ್ಕೆ ಕಸ ಬೀಳದಂತೆ ಹಸಿರು ಬಣ್ಣದ ಬಲೆಯನ್ನು ಕಟ್ಟಿದ್ದರು. ಮೇ 14 ರಂದು ಸಂಜೆ 6 ರ ಸುಮಾರಿಗೆ ಅವರ ಪುತ್ರ ಅಭಿಷೇಕ್ (3) ಮನೆಯ ಅಂಗಳದಲ್ಲಿ ಆಟ ಆಡುತ್ತಿದ್ದನು. ತಾಯಿ ಮನೆಯೊಳಗೆ ಇದ್ದು, ತಂದೆ ನೋಣಯ್ಯ ಅವರು ಕೆಲಸ ಮುಗಿಸಿ ಬಂದು ಹೊರಗೆ ಹೋಗಿದ್ದರು. ಆಡುತ್ತಿದ್ದ ಅಭಿಷೇಕ್ ಬಾವಿಯ ಕಟ್ಟೆಯನ್ನು ಹತ್ತಿ ಬಾವಿಗೆ ಅಡ್ಡಲಾಗಿ ಕಟ್ಟಿರುವ ಹಸಿರು ಬಲೆಯಲ್ಲಿ ಹೋಗಿದ್ದು, ಮಧ್ಯಕ್ಕೆ ತಲುಪುವ ವೇಳೆ ಅದು ಭಾರದಿಂದ ಹರಿದು ಮಗು ಏಕಾಏಕಿ ಬಾವಿಗೆ ಬಿದ್ದಿದೆ. ಇದೇ ವೇಳೆ ಅದೇ ದಾರಿಯಲ್ಲಿ ತೆರಳುತ್ತಿದ್ದ ಉಮೇಶ್ ಮಠದಬೆಟ್ಟು ಎಂಬಾತ
ಬೊಬ್ಬೆ ಕೇಳಿ ಧಾವಿಸಿ ಏಕಾಏಕಿ ಅಲ್ಲೇ ಇದ್ದ ಹಗ್ಗದಲ್ಲಿ ಇಳಿದು ಬಾವಿಯಲ್ಲಿ ನೀರಿನಲ್ಲಿ ಮಗುವನ್ನು ಎತ್ತಿ ಹಿಡಿದಿದ್ದಾರೆ. ಬಳಿಕ ಮಗುವಿನ ತಂದೆ ಬಂದು ಮಗುವನ್ನು ಹಗ್ಗದ ಮೂಲಕ ಮೇಲಕ್ಕೆ ಎತ್ತಿದ್ದಾರೆ.
ಬಾವಿಯಲ್ಲಿ ಮಗುವಿನ ಕುತ್ತಿಗೆವರೆಗೆ ನೀರು ಇದ್ದು, ಉಮೇಶ್ ಇಳಿಯುವ ವೇಳೆ ನೀರಿನಲ್ಲಿ ನಿಂತಿದ್ದನು ಎನ್ನಲಾಗಿದೆ.
ಉಮೇಶ್ ಅವರ ಸಾಹಸಕ್ಕೆ ಪ್ರಸ್ತುತ ಎಲ್ಲಡೆಯಿಂದಲೂ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದೆ.