ಉಡುಪಿ: ಉಡುಪಿಯ ಪೆರ್ಡೂರು ಸಮೀಪ ಚಾಲಕ ನಿದ್ದೆ ಮಂಪರಿಗೆ ಜಾರಿದ ಪರಿಣಾಮ ಕಾರೊಂದು ರಸ್ತೆ ಬದಿಗೆ ಸರಿದಿದ್ದು ಅದರೊಳಗಿದ್ದವರು ಬಚಾವಾಗಿದ್ದಾರೆ. ಕಾರಿನಲ್ಲಿದ್ದವರು ಚಿತ್ರದುರ್ಗ ಮೂಲದವರು ಎಂದು ತಿಳಿದುಬಂದಿದೆ. ಕಾರ್‌ನಲ್ಲಿದ್ದ ರೋಗಿಯನ್ನು ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಗೆ ಆಪದ್ಭಾಂಧವ ಈಶ್ವರ್ ಮಲ್ಪೆ ತಲುಪಿಸಿದ್ದಾರೆ.
ಚಿತ್ರದುರ್ಗದಿಂದ ಮಂಗಳೂರಿಗೆ ಗ್ಯಾಂಗ್ರಿನ್ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯನ್ನು ಕರೆದುಕೊಂಡು ಬರುತ್ತಿದ್ದ ಖಾಸಗಿ ಕಾರು ಇದಾಗಿದ್ದು, ಚಾಲಕ ನಿದ್ದೆ ಮಂಪರಿಗೆ ಜಾರಿ ನಿಯಂತ್ರಣ ಕಳೆದುಕೊಂಡು ರಸ್ತೆಬದಿಯ ಚರಂಡಿಯಲ್ಲಿ ಸಿಲುಕಿತ್ತು. ಅದೇ ದಾರಿಯಲ್ಲಿ ಮಲ್ಪೆ ಬೀಚ್‌ಗೆ ಬರುತ್ತಿದ್ದ ಈಶ್ವರ್ ಮಲ್ಪೆಯವರ ಸ್ನೇಹಿತರು ಇದನ್ನು ಗಮನಿಸಿದ್ದಾರೆ. ರೋಗಿಯನ್ನು ತುಂತುರು ಮಳೆಗೆ ರಸ್ತೆಯಲ್ಲಿಯೇ ಮಲಗಿಸಿದ್ದನ್ನು ಕಂಡು ತಕ್ಷಣ ಈಶ್ವರ್ ಮಲ್ಪೆಯವರಿಗೆ ಕರೆ ಮಾಡಿದ್ದಾರೆ. ಕರೆಗೆ ಸ್ಪಂದಿಸಿದ ಆಪದ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡವು, ಪೆರ್ಡೂರು ಪಾಡಿಗಾರಕ್ಕೆ ತಲುಪಿ ರೋಗಿಯನ್ನು ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಗೆ ಉಚಿತ ಸೇವೆಯ ಮೂಲಕ ತಲುಪಿಸಿ ಮಾನವೀಯತೆ ಮೆರೆದಿದೆ.