ಮಂಗಳೂರು: ನಿನ್ನೆ(ಮೇ.24) ರಾತ್ರಿ ಸುರಿದ ಮಳೆಗೆ ಕೊಟ್ಟಾರ ಬಳಿ ರಾಜಕಾಲುವೆಯಲ್ಲಿ ರಿಕ್ಷಾವೊಂದು ಕೊಚ್ಚಿ ಹೋಗಿ ಚಾಲಕ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ ನಡೆದಿದ್ದು, ಇದೀಗ ರಾಜಕಾಲುವೆ ಸರಿಯಾಗಿ ಕ್ಲೀನ್ ಮಾಡದೆ ನಿರ್ಲಕ್ಷ್ಯ ತೋರಿಸಿರುವ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ದ ಎಫ್ಐಆರ್ ದಾಖಲಾಗಿದೆ.
ನಗರದಲ್ಲಿ ಶುಕ್ರವಾರ ರಾತ್ರಿ ಇಡೀ ಧಾರಾಕಾರ ಮಳೆಯಾಗಿದ್ದು ಕೊಟ್ಟಾರ ಚೌಕಿಯಲ್ಲಿ ತಗ್ಗು ಪ್ರದೇಶದ 20ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಮಳೆ ನೀರು ಹರಿಯುವ ಕಾಲುವೆಯಲ್ಲಿ ರಿಕ್ಷಾವೊಂದು ಕೊಚ್ಚಿ ಹೋಗಿದ್ದು, ಚಾಲಕ ಕೊಟ್ಟಾರ ನಿವಾಸಿ ದೀಪಕ್ ಆಚಾರ್ಯ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದರು. ಇದೀಗ ಮಹಾನಗರಪಾಲಿಕೆಯ ಅಧಿಕಾರಿಗಳ ನಿರ್ಲಕ್ಷದ ವಿರುದ್ದ ಮಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಚರಂಡಿಯನ್ನು ಕ್ಲಪ್ತ ಸಮಯದಲ್ಲಿ ಸ್ವಚ್ಚಗೊಳಿಸದೇ ಇದ್ದ ಕಾರಣ ಚರಂಡಿಯಲ್ಲಿ ಮಳೆ ನೀರು ತುಂಬಿ ಬ್ಲಾಕ್ ಆಗಿ ರಸ್ತೆ ಮೇಲೆ ಹರಿದಿದ್ದು, ಇದರಿಂದಾಗಿ ಚರಂಡಿ ಕಾಣಿಸದೇ ಇದ್ದದರಿಂದಾಗಿ ಈ ಅಪಘಾತವಾಗಿದ್ದು, ರಸ್ತೆ ತಿರುವಿನಲ್ಲಿ ಚರಂಡಿಗೆ ಮುಂಜಾಗೃತ ಕ್ರಮವಾಗಿ ತಡೆಗೋಡೆಯನ್ನು ನಿರ್ಮಿಸದೇ ನಿರ್ಲಕ್ಷವಹಿಸಿದ್ದಾರೆ ಎಂದು ದೂರಿನಲ್ಲಿ ನೀಡಲಾಗಿದೆ.