ಉಡುಪಿಯಲ್ಲಿ ಗೃಹಸಚಿವ ಜಿ. ಪರಮೇಶ್ವರ್ ಹೇಳಿಕೆ
ಉಡುಪಿ: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಅದನ್ನು ರಾಜಕೀಯ ಕಾರಣಕ್ಕಾಗಿ ನಾವು ಪ್ರಾರಂಭಿಸಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪಟ್ಟಣ ಪ್ರದೇಶದಲ್ಲಿ ಗ್ಯಾರಂಟಿ ಯೋಜನೆಗಳು ಎಷ್ಟು ಉಪಯೋಗ ಆಗುತ್ತೋ ಗೊತ್ತಿಲ್ಲ. ಆದರೆ ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ಉಪಯೋಗ ಆಗುತ್ತಿದೆ. ಬಡವರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಗ್ಯಾರಂಟಿ ಯೋಜನೆಯಿಂದ ತುಂಬಾ ಅನುಕೂಲವಾಗಿದೆ. ಹೀಗಾಗಿ, ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದರು.
ಲೋಕಸಭೆ ಚುನಾವಣೆ ಸೋಲಿನ ಪರಾಮರ್ಶೆ ನಡೆಸುತ್ತೇವೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದೇವೆ. ಸೋಲಿನ ಪರಾಮರ್ಶೆಗಾಗಿ ಸಮಿತಿಯನ್ನು ರಚಿಸುವ ನಿರ್ಧಾರ ತೆಗೆದುಕೊಂಡಿದ್ದೇವೆ. ಸಮಿತಿ ಮೂಲಕ ಸೋಲಿಗೆ ಕಾರಣ ಏನು ಎಂಬ ಬಗ್ಗೆ ವಿಚಾರ ಮಾಡುತ್ತೇವೆ ಎಂದು ಅವರು ಹೇಳಿದರು.