ಚಂಡೀಗಢ : ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ (CISF) ಮಹಿಳಾ ಸಿಬ್ಬಂದಿ ತನಗೆ ಕಪಾಳಮೋಕ್ಷ ಮಾಡಿದ್ದಾಗಿ ಬಾಲಿವುಡ್ ನಟಿ ಹಾಗೂ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ನೂತನ ಸಂಸದೆ ಕಂಗನಾ ರನೌತ್ ಆರೋಪಿಸಿದ್ದಾರೆ. ದೆಹಲಿಗೆ ಆಗಮಿಸಿದ ಕಂಗನಾ ಹಿರಿಯ ಸಿಐಎಸ್‌ಎಫ್ (CISF) ಅಧಿಕಾರಿಗಳ ದೂರು ನೀಡಿದ್ದಾರೆ.
*ಕಂಗನಾಗೆ ಕಪಾಳಮೋಕ್ಷ ಮಾಡಿದ್ದು ಯಾಕೆ?*
ದೆಹಲಿಗೆ ಪ್ರಯಾಣ ಬೆಳೆಸಲು ಕಂಗನಾ ಚಂಢೀಗಢ ವಿಮಾನ ನಿಲ್ದಾಣಕ್ಕೆ ಮದ್ಯಾಹ್ನ 3.30 ರ ಸುಮಾರಿಗೆ ಆಗಮಿಸಿದ್ದರು. ಈ ವೇಳೆ ಭದ್ರತಾ ತಪಾಸಣೆ ಮಾಡುತ್ತಿದ್ದ ಮಹಿಳಾ ಸಿಐಎಸ್‌ಎಫ್ (CISF) ಸಿಬ್ಬಂದಿ ಜೊತೆ ಕಿರಿಕ್ ನಡೆದಿದೆ. ಸಿಐಎಸ್‌ಎಫ್‌ನ ಮಹಿಳಾ ಸಿಬ್ಬಂದಿ ಕುಲ್ವಿಂದರ್ ಕೌರ್ ಅವರು ಈ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಕಂಗನಾ ಇದು ರೈತರ ಆಂದೋಲನದ ವಿರುದ್ಧ ತಾನು ಮಾತನಾಡಿದ ಕೋಪದಿಂದ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
*ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಬಂಧನ:*
ದೆಹಲಿಯ ಹಿರಿಯ ಅಧಿಕಾರಿಗಳಿಗೆ ಕಂಗನಾ ದೂರು ನೀಡಿದ ಹಿನ್ನಲೆಯಲ್ಲಿ ಕುಲ್ವಿಂದರ್ ಕೌರ್ ಅವರನ್ನು ಕಮಾಂಡಿಗ್ ಆಫೀಸರ್ ಬಂಧಿಸಿದ್ದಾರೆ. ಘಟನೆಯ ಕುರಿತು ಕೌರ್ ಅವರಿಂದ ಮಾಹಿತಿ ಪಡೆಯಲಾಗಿದ್ದು, ಘಟನಾ ಸ್ಥಳದಲ್ಲಿದ್ದ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರೀಶೀಲನೆ ನಡೆಸಿದ್ದಾರೆ. ಇದೊಂದು ಗಂಭೀರ ಆರೋಪವಾಗಿ ಪರಿಗಣಿಸಿದ ಸಿಐಎಸ್ಎಪ್ ಅಧಿಕಾರಿಗಳು ತನಿಖಾ ಸಮಿತಿ ರಚಿಸಿ ತನಿಖೆ ನಡೆಸುತ್ತಿದ್ದಾರೆ.
2024 ರ ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರವನ್ನು ಗೆಲ್ಲುವ ಮೂಲಕ ಕಂಗನಾ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ರನೌತ್ ಅವರು ಕಾಂಗ್ರೆಸ್‌ನ ವಿಕ್ರಮಾದಿತ್ಯ ಸಿಂಗ್ ವಿರುದ್ಧ ನಿರ್ಣಾಯಕ ಗೆಲುವು ಸಾಧಿಸಿದ್ದಾರೆ.