ವಿಟ್ಲ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಇಬ್ಬರು ವ್ಯಕ್ತಿಗಳು ಸೇರಿಕೊಂಡು ಇಬ್ಬರ ಯುವಕರ ಮೇಲೆ ಹಲ್ಲೆ ನಡೆಸಿದ ಘಟನೆ ಕನ್ಯಾನದಲ್ಲಿ ನಡೆದಿದೆ.
ಕನ್ಯಾನ ಮಂಡ್ಯೂರು ನಿವಾಸಿಗಳಾದ ಅಬ್ದುಲ್ ಖಾದರ್ ಮತ್ತು ಮೊಹಮ್ಮದ್ ಸಯಾಪ್ ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಬ್ದುಲ್ ಖಾದರ್ ಮತ್ತು ಮೊಹಮ್ಮದ್ ಸಯಾಪ್ ಎಂಬವರು ವಿಟ್ಲದಿಂದ ಕಾರಿನಲ್ಲಿ ಬಂದು ಕನ್ಯಾನ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ವೇಳೆ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ವ್ಯಕ್ತಿಗಳು ಕಾರಿಗೆ ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿ, ಜಾತಿ ನಿಂದನೆ ಮಾಡಿ, ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳು ಆರೋಪಿಸಿ, ವಿಟ್ಲ ಪೊಲೀಸ್ ಠಾಣೆ ದೂರು ನೀಡಿದ್ದಾರೆ.
ಇನ್ನೊಂದು ದೂರು:
ಕನ್ಯಾನ ಜಂಕ್ಷನ್ ನಲ್ಲಿ ವಾಹನ ಚಲಾವಣೆಯ ವೇಳೆ ದ್ವಿಚಕ್ರ ವಾಹನ ಸವಾರ ತಮ್ಮ ವಾಹನಕ್ಕೆ ಸೈಡ್ ಕೊಡಲಿಲ್ಲ ಎಂಬ ಕಾರಣಕ್ಕೆ ಕಾರಿನಲ್ಲಿದ್ದ ಯುವಕರ ತಂಡವೊಂದು ದ್ವಿಚಕ್ರ ಸವಾರನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಹಲ್ಲೆಗೊಳಗಾದ ದ್ವಿಚಕ್ರ ಸವಾರನನ್ನು ಪ್ರಕಾಶ್ (47) ಎಂದು ಗುರುತಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಕನ್ಯಾನ ಮುಖ್ಯ ಪೇಟೆಯಲ್ಲಿ ಎಂಬಾತನು ತನ್ನ ಸಹ ಸವಾರನ ಜೊತೆ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕಾರಿನಲ್ಲಿದ್ದ ಯುವಕರ ತಂಡವೊಂದು ತಮ್ಮ ವಾಹನಕ್ಕೆ ಸೈಡ್ ಕೊಡಲಿಲ್ಲ ಎಂಬ ಕಾರಣಕ್ಕೆ ಸ್ಕೂಟರ್ ಸವಾರನನ್ನು ಎಳೆದು ಹಾಕಿ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ ಸ್ಕೂಟರ್ ಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.