ಬಡಾನಿಡಿಯೂರು ಪಿಡಿಓ ವಿರುದ್ಧ ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

Share with

ಉಡುಪಿ: ಬಡಾನಿಡಿಯೂರು ಗ್ರಾಮ ಪಂಚಾಯತ್ ಕಚೇರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ ಘಟನೆ ಇಂದು ನಡೆದಿದೆ. ಪಂಚಾಯತ್ ಕಚೇರಿಗೆ ಬೀಗ ಜಡಿದು ಪಿಡಿಓ ಮಾಲತಿ ಅವರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಬಡಾನಿಡಿಯೂರು ಗ್ರಾಪಂನಲ್ಲಿ ಕಳೆದ 6 ವರ್ಷದಿಂದ ಸೇವೆ ಸಲ್ಲಿಸಿ ಸರಕಾರದ ಆದೇಶದಂತೆ ವರ್ಗಾವಣೆಗೊಂಡ ಪಿಡಿಓ ಮಾಲತಿ ಅವರು, ಕೋರ್ಟ್ ಮೊರೆ ಹೋಗಿ ಮತ್ತೆ ಅದೇ ಗ್ರಾ. ಪಂ. ಗೆ ವಾಪಸು ವರ್ಗಾವಣೆ ಮಾಡಿಕೊಂಡು ಅಧಿಕಾರ ವಹಿಸಲು ಮುಂದಾಗಿದ್ದಾರೆ. ಇದರ ವಿರುದ್ಧ ಗ್ರಾಮಸ್ಥರು ಪಕ್ಷಬೇಧ ಮರೆತು ಪ್ರತಿಭಟನೆ ನಡೆಸಿದರು. ಪಂಚಾಯತ್ ನ ಮಾಜಿ ಅಧ್ಯಕ್ಷ ಪ್ರಭಾಕರ್ ತಿಂಗಳಾಯ ಅವರು ಮಾತನಾಡಿ, ಪಿಡಿಒ ಮಾಲತಿ ಅವರು ಈಗಾಗಲೇ ಸರಕಾರದ ಆದೇಶದ ಮೇರೆಗೆ ಅಮಾವಾಸೆಬೈಲು ಪಂಚಾಯತ್ ಗೆ ಮಾ. 16ರಂದು ವರ್ಗಾವಣೆಗೊಂಡಿರುತ್ತಾರೆ. ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿಡಿಒ ರಾಜೇಶ್ ಶೆಣೈ ಅವರನ್ನು ಇಲ್ಲಿನ ಪಂಚಾಯತ್ ಗೆ ನಿಯುಕ್ತಿಗೊಳಿಸಲಾಗಿತ್ತು. ಮಾಲತಿ ಅವರು ನಿಯುಕ್ತಿಗೊಂಡ ಅಧಿಕಾರಿಗೆ ಇನ್ನೂ ಕೂಡ ಅಧಿಕಾರ ಹಸ್ತಾಂತರ ಮಾಡದೇ ಯಾವುದೇ ಕೆಲಸವನ್ನು ಮಾಡದಂತೆ ಪಂಚತಂತ್ರದ ಸಹಿ ಅಥೋರಿಟಿಯನ್ನು ಬಂದ್ ಮಾಡಿಸಿದ್ದರು ಎಂದು ದೂರಿದರು.
ಪಂಚಾಯತ್ ಉಪಾಧ್ಯಕ್ಷ ಗಿರೀಶ್ ಸಾಲ್ಯಾನ್ ಮಾತನಾಡಿ, ಗ್ರಾಮದ ಯಾವುದೇ ಕೆಲಸಗಳು ನಡೆಯದ ಹಿನ್ನಲೆಯಲ್ಲಿ ಪಿಡಿಒ ಮಾಲತಿ ಬಗ್ಗೆ ಗ್ರಾಮಸ್ಥರ ವಿರೋಧವಿದೆ. ಅವರು ಜನಪರವಾಗಿ ಇರಲಿಲ್ಲ, ಜನವಿರೋಧಿ ನೀತಿಯನ್ನು ಅನುಸರಿಸಿದ್ದರಿಂದ ಗ್ರಾಮಸ್ಥರು ನಮಗೆ ಅಂತಹ ಪಿಡಿಒ ಬೇಡವೆಂದೇ ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಶಾಸಕರ ಭೇಟಿ:
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಯಶ್ಪಾಲ್ ಎ. ಸುವರ್ಣ ಅವರು ಮಾತನಾಡಿ, ಅಧಿಕಾರಿಗಳ ನಿರ್ಲಕ್ಷ ತನದಿಂದ ಇಂತಹ ಘಟನೆಗಳು ನಡೆಯಲು ಕಾರಣ. ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಗಮನಕ್ಕೆ ಈಗಾಗಲೇ ತರಲಾಗಿದೆ. ಘಟನಾ ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ಸಮಸ್ಯೆ ಪರಿಹರಿಸುವ ಬಗ್ಗೆ ತಿಳಿಸಿದ್ದಾರೆ. ಮುಂದೆ ಗ್ರಾಮದಲ್ಲಿ ಇಂತಹ ಯಾವುದೇ ಪ್ರತಿಭಟನೆಗಳು ನಡೆಯದಂತೆ ಅವಕಾಶ ಮಾಡಿಕೊಡಬೇಕಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿಜಯ ಅವರು ಪ್ರತಿಭಟನೆ ಸ್ಥಳಕ್ಕೆ ಅಗಮಿಸಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಇಲ್ಲಿಗೆ ವರ್ಗಾವಣೆಗೊಂಡ ಪಿಡಿಓ ಮಾಲತಿ ಅವರಿಗೆ ಯಾವುದೇ ಅಧಿಕಾರ ಕೊಡುವುದಿಲ್ಲ. ಹೊಸ ಪಿಡಿಓ ನೇಮಕವಾಗುವವರೆಗೆ ಪಂಚಾಯತ್ ನ ಎಲ್ಲ ಕೆಲಸಗಳನ್ನು ಈಗಿರುವ ಕಾರ್ಯದರ್ಶಿ ಅವರಿಗೆ ವಹಿಸಿಕೊಡಲಾಗುತ್ತದೆ. ಗ್ರಾಮಸ್ಥರು ಪಂಚಾಯತ್ ನ ಹಾಕಿದ ಬೀಗವನ್ನು ತೆಗೆಯುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಯಶೋದ ಆಚಾರ್ಯ, ಕಾಂಗ್ರೆಸ್ ನಾಯಕ ಪ್ರಸಾದ್ ಕಾಂಚನ್, ಗ್ರಾ. ಪಂ. ಸದಸ್ಯರಾದ ಪ್ರವೀಣ್ ಕಾಂಚನ್, ಜೋಸ್ ಪಿಂಟೋ, ಆಶಾ, ಶೋಭಾ ಸಾಲ್ಯಾನ್, ಗ್ರಾಮಸ್ಥರಾದ ನಾಗೇಂದ್ರ ಮೆಂಡನ್, ಸುಂದರ್ ಜತ್ತನ್ ಉಪಸ್ಥಿತರಿದ್ದರು


Share with

Leave a Reply

Your email address will not be published. Required fields are marked *