ಮುಚ್ಚುವ ಭೀತಿಯಲ್ಲಿ ಬ್ರಹ್ಮಾವರ ಡಿಪ್ಲೋಮಾ ಕೃಷಿ ಕಾಲೇಜು

Share with

ಶೀಘ್ರವೇ ಕಾಲೇಜು ಆರಂಭಿಸುವಂತೆ ಆಗ್ರಹಿಸಿ ಧರಣಿ

ಧರಣಿನಿರತರಿಗೆ ಭರವಸೆಕೊಟ್ಟ ಉಸ್ತುವಾರಿ ಸಚಿವೆ

ಉಡುಪಿ: ಮುಚ್ಚುವ ಭೀತಿಯಲ್ಲಿರುವ ಬ್ರಹ್ಮಾವರ ಡಿಪ್ಲೋಮಾ ಕೃಷಿ ಮಹಾ ವಿದ್ಯಾಲಯವನ್ನು ಉಳಿಸಿ, ಕೃಷಿ ಕಾಲೇಜನ್ನು ಆರಂಭಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ರೈತ ಸಂಘ, ಸಿಐಟಿಯು ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.
ಕರಾವಳಿ ಜಿಲ್ಲೆಗಳಲ್ಲಿ ಕೃಷಿ ಕಾಲೇಜು ಇಲ್ಲದ ಕಾರಣ 2016ರಲ್ಲಿ ಅಂದಿನ ಕೃಷಿ ಸಚಿವ ಕೃಷ್ಣಭೈರೆ ಗೌಡ ಬ್ರಹ್ಮಾವರಕ್ಕೆ ಕೃಷಿ ಕಾಲೇಜನ್ನು ಘೋಷಿಸುವ ಭರವಸೆ ಯನ್ನು ನೀಡಿದ್ದರು. ಆದರೆ ಈ ಹಿಂದಿನ ಸರಕಾರ ಕಳೆದ ವರ್ಷ ರಾಜ್ಯದಲ್ಲಿನ ಡಿಪ್ಲೋಮಾ ಕೃಷಿ ಮಹಾವಿದ್ಯಾಲಯವನ್ನು ಮುಚ್ಚುವಂತೆ ಆದೇಶ ಹೊರಡಿ ಸಿದ್ದು, ಇದರಿಂದಾಗಿ ಬ್ರಹ್ಮಾವರ ಕೃಷಿಕರ ಆಶಾಕಿರಣವಾಗಿದ್ದ ಕೃಷಿ ಕಾಲೇಜು ಆರಂಭಕ್ಕೂ ಮುನ್ನವೇ ಇಲ್ಲಿನ ಡಿಪ್ಲೋಮಾ ಕೃಷಿ ಮಹಾವಿದ್ಯಾಲಯ ಬಾಗಿಲು ಮುಚ್ಚುವ ಸ್ಥಿತಿ ತಲುಪಿದೆ. 2023-24ನೇ ಸಾಲಿನ ದಾಖಲಾತಿಯನ್ನು ಸ್ಥಗಿತಗೊಳಿಸಲಾಗಿದ್ದು, ಬೋಧಕೇತರ ಸಿಬ್ಬಂದಿಗಳಲ್ಲಿ ಕೆಲವರನ್ನು ಎ.30ರಿಂದಲೇ ಕೆಲಸದಿಂದ ಕೈಬಿಡಲಾಗಿದೆ ಎಂದು ಧರಣಿನಿರತರು ಆರೋಪಿಸಿದರು.
ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಆರಂಭಕ್ಕೆ ಈಗಾಗಲೇ ವಿವಿಗೆ ಹಲವು ಬಾರಿ ಮನವಿಯನ್ನು ಸಲ್ಲಿಸಲಾಗಿತ್ತು. ಜೊತೆಗೆ ಕೃಷಿಕರು ನಿರಂತರವಾಗಿ ರಾಜ್ಯ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ. ಇದಕ್ಕೆ ಯಾವುದೇ ಸರಿಯಾದ ಸ್ಪಂದನೆ ಸಿಕ್ಕಿಲ್ಲ ಎಂದು ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ ಆರೋಪಿಸಿದ್ದಾರೆ.
ಉಸ್ತುವಾರಿ ಸಚಿವರಿಂದ ಭರವಸೆ:
ಧರಣಿಯ ಸ್ಥಳಕ್ಕೆ ಆಗಮಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿಗೆ ಅವರಿಗೆ ಈ ಕುರಿತ ಮನವಿಯನ್ನು ಧರಣಿನಿರತರು ಸಲ್ಲಿಸಿದರು.
ಮನವಿ ಸ್ವೀಕರಿಸಿದ ಸಚಿವರು ಹೋರಾಟ ಸಮಿತಿ ನಿಯೋಗ ಬೆಂಗಳೂರಿಗೆ ಆಗಮಿಸಿದರೆ, ಜೂ.13ರಂದು ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರನ್ನು ಭೇಟಿ ಮಾಡಿಸಿ ಕೃಷಿ ಕಾಲೇಜಿನ ಬಗ್ಗೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು.
ಧರಣಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಚಂದ್ರಶೇಖರ್, ಮಾಜಿ ವಿಧಾನ ಪರಿಷತ್ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ, ನ್ಯಾಯವಾದಿ ರವಿ ಶೆಟ್ಟಿ, ಮಾಜಿ ತಾಪಂ ಸದಸ್ಯ ಸದಾನಂದ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ಶರತ್ ಶೆಟ್ಟಿ, ದೇವಾನಂದ ಶೆಟ್ಟಿ, ಜಿಪಂ ಮಾಜಿ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ದಸಂಸ ಮುಖಂಡರಾದ ಹರಿಶ್ಚಂದ್ರ, ಪ್ರಶಾಂತ್, ಸಿಐಟಿಯು ಮುಖಂಡರಾದ ಕೆ.ಶಂಕರ್, ವೆಂಕಟೇಶ್ ಕೋಣಿ, ಕವಿರಾಜ್, ಶಶಿಧರ್ ಗೊಲ್ಲ, ಸುರೇಶ್ ಕಲ್ಲಾಗರ್ ಮೊದಲಾದವರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *