ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ಬಕ್ರೀದ್ ಆಚರಣೆ

Share with

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಈದುಲ್ ಅಝ್‌ಹಾ (ಬಕ್ರೀದ್) ಹಬ್ಬವನ್ನು ಇಂದು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಉಡುಪಿ ನಗರ, ಕಾಪು, ಬ್ರಹ್ಮಾವರ, ಕುಂದಾಪುರ, ಬೈಂದೂರು, ಹೆಬ್ರಿ, ಕಾರ್ಕಳ ತಾಲೂಕುಗಳ ವಿವಿಧ ಮಸೀದಿಗಳಲ್ಲಿ ವಿಶೇಷ ಈದ್ ನಮಾಝ್ ನೆರವೇರಿಸಲಾಯಿತು.
ಮುಸ್ಲಿಮರು ಬೆಳಗ್ಗೆ ಹೊಸ ಬಟ್ಟೆ ಧರಿಸಿಕೊಂಡು ಮಸೀದಿಗೆ ತೆರಲಿ ಪ್ರಾರ್ಥನೆ ಸಲ್ಲಿಸಿದರು. ಕೆಲವು ಮಸೀದಿಗಳಲ್ಲಿ ಮಹಿಳೆಯರಿಗೂ ಈದ್ ನಮಾಝ್ ನಿರ್ವಹಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ನಮಾಝ್ ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಉಡುಪಿ ಜಾಮೀಯ ಮಸೀದಿಯಲ್ಲಿ ಮೌಲಾನಾ ಅಬ್ದುರ್ರಶೀದ್ ನದ್ವಿ ನೇತೃತ್ವದಲ್ಲಿ ಮತ್ತು ಉಡುಪಿ ಅಂಜುಮಾನ್ ಮಸೀದಿಯಲ್ಲಿ ಮೌಲಾನ ಇನಾಯುತುಲ್ಲಾ ರಝ್ವಿ ನೇತೃತ್ವದಲ್ಲಿ ಈದ್ ನಮಾಝ್ ನಿರ್ವಹಿಸಲಾಯಿತು.
ಉಡುಪಿ ನಾಯರ್‌ಕೆರೆಯ ಹಾಶಿಮಿ ಮಸೀದಿಯಲ್ಲಿ ಈದ್ ನಮಾಝ್ ನೇತೃತ್ವವನ್ನು ಮೌಲಾನಾ ಒಬೈದುರ್ ರೆಹಮಾನ್ ನದ್ವಿ ವಹಿಸಿದ್ದರು. ಅವರು ಈದ್ ಮಹತ್ವವನ್ನು ವಿವರಿಸಿದರು ಮತ್ತು ಸಮಾಜದಲ್ಲಿ ಪ್ರೀತಿ, ಶಾಂತಿ ಮತ್ತು ಸಾಮರಸ್ಯದ ಮಹತ್ವವನ್ನು ಒತ್ತಿ ಹೇಳಿದರು. ಈದ್ ನಮಾಝ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡು ಈದ್ ಶುಭಾಶಯ ವಿನಿಮಯ ಮಾಡಿಕೊಂಡರು.
ಉಡುಪಿ ಜಿಲ್ಲಾ ಸಂಯುಕ್ತ ಜಮಾತಿನ ಕೇಂದ್ರ ಮಸೀದಿಯಾದ ಮೂಳೂರು ಜುಮಾ ಮಸೀದಿಯಲ್ಲಿ ಖತೀಬ್ ಹಾಫಿಲ್ ಮುಹಮ್ಮದ್ ಅಶ್ರಫ್ ಸಖಾಫಿ ನೇತೃತ್ವದಲ್ಲಿ ಈದ್ ವಿಶೇಷ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಿತು.
ಕುಂದಾಪುರ ಜುಮಾ ಮಸೀದಿಯಿಂದ ಬೆಳಗ್ಗೆ ಈದ್ ಮೆರವಣಿಗೆ ಹೊರಟು, ಕುಂದಾಪುರ ಈದ್ಗಾ ಮೈದಾನದಲ್ಲಿ ಧರ್ಮಗುರು ಮೌಲಾನ ಕರಾರ್ ಹುಸೇನ್ ನೇತೃತ್ವದಲ್ಲಿ ಈದ್ ವಿಶೇಷ ನಮಾಝ್ ನೆರವೇರಿಸಲಾಯಿತು.
ಗಂಗೊಳ್ಳಿಯ ಜುಮಾ ಮಸೀದಿಯಲ್ಲಿ ಮೌಲಾನ ಮುಝಮ್ಮಿಲ್ ನದ್ವಿ, ಮೋಹಿದೀನ್ ಜುಮಾ ಮಸೀದಿಯಲ್ಲಿ ಖತೀಬ್ ಮೌಲಾನ ಅಬ್ದುಲ್ ಕರೀಂ ನದ್ವಿ, ಶಾಹಿ ಜುಮಾ ಮಸೀದಿಯಲ್ಲಿ ಮೌಲಾನ ರೆಹಮತುಲ್ಲಾ ಕೋಲ್ಕರ್ ನದ್ವಿ ಅವರ ನೇತೃತ್ವದಲ್ಲಿ ವಿಶೇಷ ನಮಾಝ್ ನಿರ್ವಹಿಸಲಾಯಿತು.
ಹಬ್ಬದ ದಿನ ಯಾವುದೇ ಅಹಿತಕರ ಘಟನೆ ನಡೆದಂತೆ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ


Share with

Leave a Reply

Your email address will not be published. Required fields are marked *