ಉಡುಪಿ: ಕುಂದಾಪುರ ತಾಲೂಕಿನ ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದ ಗೋಶಾಲೆಯಲ್ಲಿ ಗೋವುಗಳ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ನಡೆದಿದೆ.
ಸೋಮವಾರ ಮುಂಜಾನೆ 2:46ರ ಸುಮಾರಿಗೆ ಗೋಶಾಲೆಗೆ ನುಗ್ಗಿದ ಗೋವು ಕಳ್ಳರು, ಗೋ ಶಾಲೆಯ ಎದುರಿನ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿದ್ದರು. ಬಳಿಕ ಗೋಶಾಲೆಯ ಪಕ್ಕದ ಬಾಗಿಲು ತೆರೆದು ಹಸುವಿಗೆ ಕಟ್ಟಿದ ಹಗ್ಗವನ್ನು ತುಂಡರಿಸಿದ್ದರು. ಕಳ್ಳತನ ಯತ್ನವನ್ನು ಲೈವ್ ಮಾನಿಟರಿಂಗ್ ನಲ್ಲಿ ಗಮನಿಸಿದ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ಸಿಬ್ಬಂದಿ, ತಕ್ಷಣವೇ ಪೊಲೀಸ್ ಇಲಾಖೆ, ದೇವಳದ ಭದ್ರತಾ ವಿಭಾಗಕ್ಕೆ ಮಾಹಿತಿ ರವಾನಿಸಿದ್ದಾರೆ. ಅಲ್ಲದೇ, ತಕ್ಷಣವೇ ಅಲರ್ಟ್ ಆದ ದೇವಳದ ಭದ್ರತಾ ಸಿಬ್ಬಂದಿ ಗೋಶಾಲೆಯ ಬಳಿ ತೆರಳಿದ್ದಾರೆ. ಭದ್ರತಾ ಸಿಬ್ಬಂದಿಗಳನ್ನು ನೋಡಿದ ಗೋವು ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ. ಸದ್ಯ ಸಿಸಿ ಟಿವಿ ದೃಶ್ಯವನ್ನು ಆಧಾರಿಸಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.