91ನೇ ವಿಪತ್ತು ನಿರ್ವಹಣಾ ಸಮಿತಿಯ ಉದ್ಘಾಟನೆ ಮತ್ತು ತರಬೇತಿ ಕಾರ್ಯಕ್ರಮ

Share with

ಬಂಟ್ವಾಳ: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿ ಯೋಜನೆಯ ಫಲವಾಗಿ ಹುಟ್ಟಿ ಕೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಪ್ರಯೋಜನವಾಗಿದೆ. ಶೌರ್ಯ ವಿಪತ್ತು ತಂಡ ರಚನೆಯಿಂದ ಗ್ರಾಮೀಣ ಭಾಗದ ಯುವಕರು ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣದಾಯಿಯಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಜನಜಾಗೃತಿ ಪ್ರಾದೇಶಿಕ ವಿಭಾಗ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಬಂಟ್ವಾಳ ಇದರ ಸಹಭಾಗಿತ್ವದಲ್ಲಿ
ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮದ ಅಂಗವಾಗಿ
91ನೇ ವಿಪತ್ತು ನಿರ್ವಹಣಾ ಸಮಿತಿಯ ಉದ್ಘಾಟನಾ ಮತ್ತು ತರಬೇತಿ ಕಾರ್ಯಕ್ರಮವನ್ನು ಸೋಮವಾರ ಬಂಟ್ವಾಳದ ಉನ್ನತಿ ಸೌಧದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಶೌರ್ಯ ತಂಡದಲ್ಲಿ ತೊಡಗಿಸಿಕೊಳ್ಳುವ ಯುವಕರಲ್ಲಿ ಧೈರ್ಯ ಹಾಗೂ ಸಾಹಸ ಮನೋಭಾವ ಬೇಕು. ಅಗ್ನಿಶಾಮಕದಳ ಅಥವಾ ಇನ್ನಿತರ ರಕ್ಷಣಾ ತಂಡಗಳಿಗೆ ಶೌರ್ಯ ತಂಡದ ಯುವಕರ ಸಹಕಾರ ಸಿಕ್ಕಾಗ ಯಾವುದೇ ಅನಾಹುತ, ತೊಂದರೆಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಿದೆ ಎಂದರು. ಸ್ವಚ್ಚತೆಯ ಮನವರಿಕೆಯು ಈ ತಂಡದಿಂದ ಆದಲ್ಲಿ ಸ್ವಚ್ಛ ಭಾರತದ ಸಂಕಲ್ಪವೂ ಸಾಕಾರಗೊಳ್ಳಲಿದೆ ಎಂದು ತಿಳಿಸಿದರು.
ಬಂಟ್ವಾಳ ಜನಜಾಗೃತಿ ವೇದಿಕೆ ಅಧ್ಯಕ್ಷ ರೋನಾಲ್ಡ್ ಡಿಸೋಜಾ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಕೆಲಸಕ್ಕೆ ದೇವರ ಆಶೀರ್ವಾದ ಇದೆ. ಕಷ್ಟದಲ್ಲಿದ್ದವರಿಗೆ ಉಪಕಾರ ಮಾಡಿದವರಿಗೆ ಅದರ ಫಲ ದೇವರು ನೀಡುತ್ತಾನೆ ಎಂದರು. ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಮಾತನಾಡಿ ಯಾವುದೇ ಅನಾಹುತ, ದುರ್ಘಟನೆಗಳು ಸಂಭವಿಸಿದಾಗ ಸಮಾಜದ ನಾಗರಿಕನಾಗಿ ಮಾನವ ಧರ್ಮವನ್ನು ಪಾಲಿಸಿ ತನ್ನಿಂದಾಗುವ ಸೇವೆಯನ್ನು ನೀಡಬೇಕು ಎಂದು ತಿಳಿಸಿದ ಅವರು ಬಂಟ್ವಾಳದ ತಂಡ ಮಾದರಿ ತಂಡವಾಗಿ ಮೂಡಿಬರಲಿ ಎಂದು ಆಶಿಸಿದರು.
ಜಿಲ್ಲಾ ಅಗ್ನಿಶಾಮಕ ಠಾಣಾಧಿಕಾರಿ ಭರತ್ ಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು. ಕೇಂದ್ರ ಒಕ್ಕೂಟದ ಅಧ್ಯಕ್ಷ ಚಿದಾನಂದ ರೈ ಕಕ್ಯ, ಶ್ರೀನಿವಾಸ್ ಕಾಮತ್, ವಿಪತ್ತು ನಿರ್ವಹಣೆ ಕಾರ್ಯಕ್ರಮದ ಯೋಜನಾಧಿಕಾರಿ ಕಿಶೋರ್ ಕುಮಾರ್ ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಂಟ್ವಾಳ ಯೋಜನಾಧಿಕಾರಿ ಬಾಲಕೃಷ್ಣ ಎಂ. ಸ್ವಾಗತಿಸಿದರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಯೋಜನಾಧಿಕಾರಿ ಜಯವಂತ ಪಟಗಾರ ಪ್ರಾಸ್ತವಿಕವಾಗಿ ಮಾತನಾಡಿದರು. ಜನಜಾಗೃತಿ ವೇದಿಕೆ ಉಡುಪಿ ಪ್ರಾದೇಶಿಕ ಕಚೇರಿ ಯೋಜನಾಧಿಕಾರಿ ಗಣೇಶ್ ಪಿ. ಆಚಾರ್ಯ ವಂದಿಸಿದರು. ತುಂಬೆ ವಲಯದ ಮೇಲ್ವಿಚಾರಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು.


Share with

Leave a Reply

Your email address will not be published. Required fields are marked *