ವಿಟ್ಲ: ಉಡುಪಿ ಕಾಸರಗೊಡು ವಿದ್ಯುತ್ ಮಾರ್ಗ ಜಿಲ್ಲೆಯ ರೈತರ ಅಳಿವು ಉಳಿವಿನ ಪ್ರಶ್ನೆಯಾಗಿದ್ದು, ಕೃಷಿ ಜಮೀನುಗಳನ್ನು ಉಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಶಾಸಕರಿಗೆ, ಸಂಸದರಿಗೆ ಮನವಿಗಳನ್ನು ಸಲ್ಲಿಸುವ ಕಾರ್ಯ ಮಾಡಿದ್ದಾರೆ. ಆದರೆ ಅವರು ಅದನ್ನು ಕಸದ ಬುಟ್ಟಿಗೆ ಎಸೆದು ಕಂಪನಿಯ ಏಜೆಂಟರಂತೆ ವರ್ತಿಸುತ್ತಿರುವುದು ಖಂಡನಾರ್ಹವಾಗಿದೆ. ಕೃಷಿ ಜಮೀನುಗಳನ್ನು ಹಾಳು ಮಾಡುವ ಯೋಜನೆ ಬರುತ್ತಿರುವುದನ್ನು ತಕ್ಷಣ ಸ್ಥಗಿತ ಮಾಡುವ ಕಾರ್ಯ ಮಾಡಬೇಕು. ರೈತರ ಮೇಲೆ ಸುಳ್ಳು ಪ್ರಕರಣ ದಾಖಲಿಸುವ ಹುನ್ನಾರ ನಡೆಯುತ್ತಿದ್ದು, ಇದು ಮುಂದುವರಿದರೆ ಮುಂದಿನ ದಿನ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಹೇಳಿದರು.
ಇನ್ನಾದಲ್ಲಿ ಬತ್ತದ ಗದ್ದೆಯನ್ನು ಹಾಳುಗೆಡಹುವ ಕಾರ್ಯ ಮಾಡುವುದನ್ನು ವಿರೋಧಿಸಿ ತೀವ್ರ ಮಟ್ಟದ ಪ್ರತಿಭಟನೆಯನ್ನು ನಡೆಸಲಾಯಿತು. ಜಿಲ್ಲಾಧಿಕಾರಿಗಳ ವರ್ತನೆ ಸರಿಯಿಲ್ಲದ ಸಮಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕಾರ್ ಯೋಜನೆಯನ್ನು ತಕ್ಷಣ ನಿಲ್ಲಿಸುವಂತೆ ಆದೇಶ ಹೊರಡಿಸಿದ್ದು, ಇದು ಉಬಯ ಜಿಲ್ಲೆಗಳಿಗೆ ಅನ್ವಯವಾಗಿದೆ. ಆದರೆ ಕಂಪನಿಗಳು ಕೆಲವು ದುರಹಂಕಾರಿ ಅಧಿಕಾರಿಗಳ ಸಹಕಾರವನ್ನು ಪಡೆದುಕೊಂಡು ರಾತ್ರಿ ಹೊತ್ತು ಕಳ್ಳರಂತೆ ಜಮೀನುಗಳಿಗೆ ನುಗ್ಗುತ್ತಿದ್ದಾರೆ. ರೈತರ ಅನ್ನ ತಿನ್ನುವ ಅಧಿಕಾರಿಗಳು ಬೇಡದ ಕೆಲಸಕ್ಕೆ ಹಾಕಿ ಹಾಕಿದರೆ ರಾಜ್ಯದ ಹಸಿರು ಸೇನೆಯನ್ನು ಒಗ್ಗೂಡಿಸಿ ಅಹಿಂಸಾತ್ಮಕವಾಗಿ ಉಗ್ರ ಪ್ರತಿಭಟನೆಯನ್ನು ನಡೆಸಬೇಕಾಗುತ್ತದೆ ಎಂದು ವಿಟ್ಲದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಎಚ್ಚರಿಸಿದರು.
ರೈತ ಸಂಘ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿ ಖಾಸಗೀ ಕಂಪನಿಯ ಯೋಜನೆಯಾಗಿದ್ದು, ೨೦೧೫ರಲ್ಲಿ ಯೋಜನೆ ಪ್ರಾರಂಭವಾದಾಗಿನಿಂದ ರೈತರಿಗೆ ನೆಮ್ಮದಿಯಿಲ್ಲ. ಶೇ.೮೦ರಷ್ಟು ರೈತರ ಒಪ್ಪಿಗೆ ಇದ್ದರೆ ಮಾತ್ರ ಯೋಜನೆ ಮಾಡಬೇಕೆಂಬ ನಿಯಮವನ್ನು ಗಾಳಿಗೆ ತೂರಿ ಕೆಲಸ ನಿರ್ವಹಿಸಲಾಗುತ್ತಿದೆ. ರೈತರಿಗೆ ಬೇಡವಾದರೆ ಯೋಜನೆಯನ್ನು ಇಲ್ಲಿಗೆ ನಿಲ್ಲಿಸಬೇಕೆಂಬ ಸೂಚನೆಯನ್ನು ಸಚಿವರು ನೀಡಿದ್ದಾರೆ. ರೈತರ ಮನೆಗಳಿಗೆ ಗೂಂಡಾಗಳನ್ನು ಕರೆದುಕೊಂಡು ಬಂದು ಹೆಸರಿಸುವ ಕೆಲಸವನ್ನು ಕಂಪನಿ ತಕ್ಷಣ ನಿಲ್ಲಿಸಬೇಕು. ರೈತರೆಂದು ಹೇಳಿಕೊಂಡು ಕೆಲವು ಕಂಪನಿಯ ಪರವಾಗಿ ಕೆಲಸ ಮಾಡುವರಿದ್ದು, ಅವರಿಗೂ ಮುಂದಿನದ ದಿನ ಕಂಪನಿಗಾಗುವ ದುಸ್ಥಿತಿ ಎದುರಾಗಲಿದೆ ಎಂದು ಎಚ್ಚರಿಸಿದರು.
೪೦೦ ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ ಮಾತನಾಡಿ ಯೋಜನೆಗೆ ಪರ್ಯಾದ ದಾರಿಯನ್ನು ಹುಡುಕುವಂತೆ ಹೋರಾಟವನ್ನು ಮಾಡಲಾಗುತ್ತಿದೆ. ಸುಳ್ಳನ್ನು ಪದೇ ಪದೇ ಹೇಳಿ ಸತ್ಯವಾಗಿಸುವ ಕಾರ್ಯ ಮಾಡಲಾಗುತ್ತಿದೆ. ಶೇ.೯೯ಮಂದಿಯೂ ಯೋಜನೆಗೆ ಒಪ್ಪಿಗೆಯನ್ನು ನೀಡಿಲ್ಲ, ಜಿಲ್ಲಾಧಿಕಾರಿಗಳು ಸಭೆಯನ್ನು ನಡೆಸಿ ಹಾಜರಾತಿ ಪುಸ್ತಕದಲ್ಲಿ ಸಹಿ ಪಡೆದು ರೈತರ ಒಪ್ಪಿಗೆ ಇದೆ ಎಂಬ ರೀತಿಯಲ್ಲಿ ಬಿಂಬಿಸುವ ಕೆಲಸ ಮಾಡಿದ್ದಾರೆ. ಜವಾಬ್ದಾರಿಯುತ ಹುದ್ದೆಯಲ್ಲಿರುವ ವ್ಯಕ್ತಿಗಳು ೪೨೦ ಕೆಲಸವನ್ನು ಮಾಡುತ್ತಿರುವುದು ಖೇದಕರವಾಗಿದೆ ಎಂದು ತಿಳಿಸಿದರು.
ಕೋಶಾಧಿಕಾರಿ ಚಿತ್ತರಂಜನ್ ಎನ್.ಎಸ್.ಡಿ., ಕಾರ್ಯದರ್ಶಿ ಕೃಷ್ಣ ಪ್ರಸಾದ್, ಲಕ್ಷ್ಮೀನಾರಾಯಣ ಮತ್ತಿತರರು ಉಪಸ್ಥಿತರಿದ್ದರು.