ಸಂಭಾಷಣೆಯ ಮೂಲಕ ಪಾತ್ರಕ್ಕೆ ಜೀವ ತುಂಬುವ ಅದ್ಭುತ ಕಲೆ ತಾಳಮದ್ದಲೆ; ಶ್ರೀಚಾರುಕೀರ್ತಿ ಸ್ವಾಮೀಜಿ
ಉಡುಪಿ: ಉಡುಪಿ ಯಕ್ಷಗಾನ ಕಲಾರಂಗದ ವತಿಯಿಂದ ಅರ್ಥಧಾರಿ, ಹವ್ಯಾಸಿ ವೇಷಧಾರಿ ಜಬ್ಬಾರ ಸಮೊ ಅವರಿಗೆ ‘ಮಟ್ಟಿ ಮುರಲೀಧರ ರಾವ್’ ಮತ್ತು ಅರ್ಥಧಾರಿ, ಹವ್ಯಾಸಿ ಕಲಾವಿದ, ಸೇರಾಜೆ ಸೀತಾರಾಮ ಭಟ್ ಅವರಿಗೆ ‘ಪೆರ್ಲ ಕೃಷ್ಣ ಭಟ್’ ಯಕ್ಷಗಾನ ಕಲಾರಂಗ ತಾಳಮದ್ದಲೆ ಪ್ರಶಸ್ತಿಯನ್ನು ನಗರದ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಮೂಡಬಿದ್ರೆ ಜೈನ ಮಠದ ಸ್ವಸ್ತಿ ಶ್ರೀಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಮಹಾಸ್ವಾಮೀ ಮಾತನಾಡಿ, ಸಂಭಾಷಣೆಯ ಮೂಲಕ ಪಾತ್ರಕ್ಕೆ ಜೀವ ತುಂಬುವ ತಾಳಮದ್ದಲೆ ಅದ್ಭುತ ಕಲೆ. ಭೂತ ಕಾಲದ ಎಲ್ಲ ಚರಿತ್ರೆಗಳು ವರ್ತಮಾನದ ಬದುಕಿನ ಸಂಘರ್ಷದಲ್ಲೂ ಎದುರಿಸಲಾಗುತ್ತದೆ. ಇದನ್ನು ಕೇವಲ ಸಾಹಿತ್ಯದಲ್ಲಿ ಮಾತ್ರ ಅಲ್ಲ, ಯಕ್ಷಗಾನದಲ್ಲಿ ಕಂಡುಕೊಳ್ಳಲು ಸಾಧ್ಯ ಎಂದರು.
ಯಾರಿಗೂ ಯುದ್ಧ ಬೇಡ. ಉಕ್ರೇನ್‌ನಲ್ಲಿ ಬಾಂಬ್ ಹಾಕಿದರೆ ಕೆಲವರಿಗೆ ರಂಜನೆ ರೀತಿಯಲ್ಲಿ ಕಾಣುತ್ತದೆ. ನಿಜವಾದ ಅಹಿಂಸವಾದಿಗೆ ಇದೆಲ್ಲವೂ ದುಃಖ ಕೊಡುತ್ತದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಮಂಗಳೂರು ಶಾರದಾ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಡಾ. ಎಂ.ಬಿ.ಪುರಾಣಿಕ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿದ್ವಾಂಸ ಪಂಜ ಭಾಸ್ಕರ ಭಟ್, ಕುಂದಾಪುರ ಆದರ್ಶ ಆಸ್ಪತ್ರೆಯ ಸಂಸ್ಥಾಪಕ ಡಾ.ಆದರ್ಶ ಹೆಬ್ಬಾರ್, ನಗರಸಭೆ ಸದಸ್ಯೆ ರಜನಿ ಹೆಬ್ಬಾರ್ ಮಾತನಾಡಿದರು.
ವೇದಿಕೆಯಲ್ಲಿ ಕಲಾರಂಗದ ಪದಾಧಿಕಾರಿಗಳಾದ ಎಸ್.ವಿ.ಭಟ್, ವಿ.ಜಿ. ಶೆಟ್ಟಿ, ಪಳ್ಳಿ ಕಿಶನ್ ಹೆಗ್ಡೆ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.