ಉಡುಪಿಯಲ್ಲಿ ಧಾರಾಕಾರ ಮಳೆ: ತಗ್ಗು ಪ್ರದೇಶಗಳು ಜಲಾವೃತ

Share with

ಉಡುಪಿ: ಉಡುಪಿ ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಮಳೆಯ ಆರ್ಭಟಕ್ಕೆ ಹಲವೆಡೆ ಕೃತಕ ನೆರೆ ಸಂಭವಿಸಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
ಉಡುಪಿ ನಗರದ ತಗ್ಗು ಪ್ರದೇಶಗಳು, ರಸ್ತೆಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಮಠದಬೆಟ್ಟು ಪರಿಸರ, ಶಿರಿಬೀಡು, ಬೈಲಕೆರೆ ಭಾಗದಲ್ಲಿ ನೆರೆ ಆತಂಕವಿದ್ದು, ಕೆಲವು ಮನೆಯ ಅಂಗಳದವರೆಗೂ ನೀರು ನುಗ್ಗಿದೆ. ಎಂಜಿಎಂ, ಕುಂಜಿಬೆಟ್ಟು ಭಾಗದಲ್ಲಿ ಹೆದ್ದಾರಿ ರಸ್ತೆಯಲ್ಲಿ ನೀರು ನಿಂತಿದ್ದು, ವಾಹನ ಸವಾರರು ಸಂಚರಿಸಲು ಪರದಾಟ ನಡೆಸಿದರು. ಉಡುಪಿ ಸಿಟಿ ಬಸ್ ನಿಲ್ದಾಣ, ಮಠದಬೆಟ್ಟು ಪರಿಸರದ ಕೆಲವು ಕಟ್ಟಡದ ಆವರಣದಲ್ಲಿ ನೀರು ನಿಂತಿದೆ. ಸಗ್ರಿ ವಾರ್ಡ್‌ನ ಕೀರ್ತಿ ನಗರ ಮೊದಲ ಕ್ರಾಸ್‌ನ ಮನೆಯೊಂದರ ಮೇಲೆ ಮರಬಿದ್ದು ಹಾನಿ ಉಂಟಾಗಿದೆ. ಪೆರಂಪಳ್ಳಿ ವಾರ್ಡ್‌ನ ಲಚ್ಚಿಲ್‌ ಮುಖ್ಯ ರಸ್ತೆಯಲ್ಲಿ ಮರಬಿದ್ದು ವಾಹನ ಓಡಾಟಕ್ಕೆ ಸಮಸ್ಯೆ ಉಂಟಾಯಿತು. ನಗರಸಭೆ ಸಿಬಂದಿ ತೆರವು ಕಾರ್ಯಾಚರಣೆ ನಡೆಸಿದರು. ಗುಂಡಿಬೈಲು ಸಹಿತ ಕೆಲವು ಭಾಗದಲ್ಲಿನ ತೆಂಗು ತೋಟ, ಗದ್ದೆಗಳು ಜಲಾವೃತಗೊಂಡಿದೆ.


Share with

Leave a Reply

Your email address will not be published. Required fields are marked *