ಉಡುಪಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಮಹತ್ವದ ಸಭೆ ನಡೆಸಿದರು.
ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಸಂತೆಕಟ್ಟೆ ಅಂಡರ್ ಪಾಸ್ ಕಾಮಗಾರಿಯನ್ನು ಅತ್ಯಂತ ಶೀಘ್ರವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು, ಅಂಡರ್ ಪಾಸ್ ಕಾಮಗಾರಿ ಪ್ರದೇಶದ ಬಂಡೆ ತೆರವು ಕಾರ್ಯಾಚರಣೆಗೆ ವೇಗ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಂತೆಕಟ್ಟೆ ಸಹಿತ ರಾಷ್ಟೀಯ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ತೊಡಕಾಗಿರುವ ಹೊಂಡ ಗುಂಡಿಗಳನ್ನು ಮುಚ್ಚ್ಚುವುದು, ರಸ್ತೆ ಸುರಕ್ಷತೆಯ ನಿಟ್ಟಿನಲ್ಲಿ ಸಮರ್ಪಕ ಬೀದಿ ದೀಪ, ಸೂಚನಾ ಫಲಕ ಅಳವಡಿಕೆ, ಹಾಗೂ ಸಾರ್ವಜನಿಕರ ಮನವಿ ಮೇರೆಗೆ ಅತೀ ಅಗತ್ಯ ಸ್ಥಳಗಳಲ್ಲಿ ಸರ್ವೀಸ್ ರೋಡ್ ನಿರ್ಮಾಣದ ಬಗ್ಗೆ ತಕ್ಷಣ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ಸಭೆಯಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾ ಕುಮಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಗಣಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.